ಪಾವಗಡ: ತಾಲ್ಲೂಕಿನ ರೈತರು ಪ್ರತಿ ವರ್ಷ ಆರಂಭದ ಮಳೆ ಬಿದ್ದಾಗ ಆಶಾವಾದದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಆದರೆ ಅತಿವೃಷ್ಟಿ ಅನಾವೃಷ್ಟಿಗೆ ತುತ್ತಾದ ರೈತರು ಇಟ್ಟ ಫಸಲು ಕೈಗೆ ಬಾರದೆ ಕಂಗಾಲಾಗುತ್ತಾರೆ. ಹೀಗಾಗಿ ಪಾವಗಡ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ಒತ್ತಾಯಿಸಿದ್ದಾರೆ.
ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಅವರು ಮಾತನಾಡಿ, ಮಳೆ ಆಶ್ರಿತ ಕಡಲೆಕಾಯಿ ಬೆಳೆ ಈ ಬಾರಿಯೂ ಕೈ ಕೊಟ್ಟಿರುವುದರಿಂದ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ ಮತ್ತು ಕೊರಟಗೆರೆ ತಾಲೂಕುಗಳಲ್ಲಿ ಮಳೆಯು ಸಕಾಲಕ್ಕೆ ಬರದೇ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಈ ನಾಲ್ಕು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮದ ಸರ್ವೆ ನಂಬರ್ 182 ರಲ್ಲಿ ಚಿತ್ತಪ್ಪ ಎಂಬ ರೈತ 3 ಎಕರೆ ಜಮೀನಿನಲ್ಲಿ ಇಟ್ಟಿರುವ ಕಡಲೆಕಾಯಿ ಬೆಳೆಯು ಸಂಪೂರ್ಣವಾಗಿ ಕೈಕೊಟ್ಟಿದೆ. ಪ್ರತಿ ವರ್ಷವೂ ಆರಂಭದಲ್ಲಿ ಮಳೆ ಬಿದ್ದಾಗ ಈ ವರ್ಷವಾದರೂ ಬೆಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ವಿವಿಧ ರೀತಿಯಲ್ಲಿ ಸಾಲ ಮಾಡಿಯಾದರು ಬಿತ್ತನೆಯಲ್ಲಿ ತೊಡಗಿದರು. ಈ ಬಾರಿ ರೈತರು ಎರಡು ಹಂತದಲ್ಲಿ ಕಡಲೆಕಾಯಿ ಬೀಜ ಬಿತ್ತನೆ ಮಾಡಿದ್ದ. ಮೊದಲ ಹಂತದ ಬೆಳೆಗೆ ಬೆಂಕಿ ಸೀಡೆ ರೋಗವು ವ್ಯಾಪಕವಾಗಿ ಆವರಿಸಿದ್ದು ಎರಡನೇ ಹಂತದ ಬೆಳೆಗೆ ಮಳೆಯ ಅಭಾವ ಉಂಟಾಗಿರುವುದರಿಂದ ರೈತ ಮತ್ತೊಮ್ಮೆ ಸಂಕಟಕ್ಕೆ ಸಿಲುಕಿದ್ದಾರೆ ಎಂದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC