ತುಮಕೂರು: ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬರ ಸೇರ್ಪಡೆಗೆ ನನ್ನ ಅಭ್ಯಂತರವಿಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದರೆ, ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಸ್.ಆರ್.ಶಾಂತಲಾ ರಾಜಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದು ಎಂಬಂತಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ಸುಮಾರು 40 ವರ್ಷ ಹೋರಾಟ ನಡೆಸಿತು. ಶೇ 7.5ರಷ್ಟು ಮೀಸಲಾತಿ ದೊರೆತ ನಂತರ ಅನ್ಯಜಾತಿಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವುದು ಎಷ್ಟು ಸರಿ ಎಂದು ಶಾಂತಲಾ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿರುವ ಜನಸಂಖ್ಯೆಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನ ಸಕಾಲಕ್ಕೆ ತಲುಪುತ್ತಿಲ್ಲ. ಬುಡಕಟ್ಟು ಉಪಯೋಜನೆ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದೆಲ್ಲದರ ಮಧ್ಯೆ ಅನ್ಯ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಸಮುದಾಯ ಭವನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಸಮುದಾಯದ ಜನರು ಎಲ್ಲರಂತೆ ಶುಲ್ಕ ಪಾವತಿಸಿ ಭವನ ಪಡೆಯಬೇಕಾಗಿದೆ. ಇಲ್ಲಿ ಕನಿಷ್ಠ ಕುರ್ಚಿ, ಟೇಬಲ್, ಅಡುಗೆ ಮಾಡಲು ಪಾತ್ರೆಯ ವ್ಯವಸ್ಥೆ ಇಲ್ಲ. ಎಲ್ಲವನ್ನು ಹೊರಗಡೆಯಿಂದ ತರಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಬಿ.ಸುರೇಶ್‌ಗೌಡ, ಸಾಮಾನ್ಯ ಕುಟುಂಬದ ವ್ಯಕ್ತಿ ಮಹಾಕಾವ್ಯ ರಚಿಸಿದರು. ಎಲ್ಲರು ವಾಲ್ಮೀಕಿ ಪುಸ್ತಕ ಓದಬೇಕು. ಒಳ್ಳೆಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಟೌನ್ ಹಾಲ್ ವೃತ್ತದಿಂದ ವಾಲ್ಮೀಕಿ ಭವನದ ವರೆಗೆ ಮೆರವಣಿಗೆ ನಡೆಯಿತು. ಸಮುದಾಯದ ತಿಪ್ಪೇರುದ್ರಪ್ಪ, ಡಾ.ಸುನೀತಾ, ನಾಗೇಂದ್ರ ಪ್ರಸಾದ್, ದೊಡ್ಡಯ್ಯ, ಸರಸ್ವತಮ್ಮ ಅವರನ್ನು ಸನ್ಮಾನಿಸಲಾಯಿತು. ಲೇಖಕಿ ಅನುಸೂಯ ಎಸ್.ಕೆಂಪನಹಳ್ಳಿ ಉಪನ್ಯಾಸ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC