ಔರಾದ್ : ತನ್ನ ನಾಕುತಂತಿಯ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ದ.ರಾ.ಬೇಂದ್ರೆ ಅವರ ವಿಚಾರಗಳು ಜಾತಿ, ಮತ, ಧರ್ಮ ಹಾಗೂ ಪ್ರದೇಶ ಮೀರಿ ಜನರನ್ನು ಇಂದಿಗೂ ಆಕರ್ಷಿಸುತ್ತಿವೆ ಎಂದು ಹಿರಿಯ ರಂಗಕರ್ಮಿ ಅನಂತ ಕೃಷ್ಣ ದೇಶಪಾಂಡೆ ಅವರು ತಿಳಿಸಿದರು.
ಔರಾದ್ ಪಟ್ಟಣದ ಅಮರೇಶ್ವರ್ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ‘ಮೂಡಲ ಬೆಳಕು–ಬೇಂದ್ರೆ ಜೀವನ ದರ್ಶನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಕನ್ನಡ ನಾಡು ಕಂಡ ಒಬ್ಬ ಅಪರೂಪದ ಶಬ್ದ ಗಾರುಡಿಗ ಬೇಂದ್ರೆ ಅವರಾಗಿದ್ದು, ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟಿದ್ದರು. ಉತ್ಸಾಹದ ಚಿಲುಮೆಯಾಗಿ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವನಗಳು ರಚಿಸಿದ್ದರು. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬುದನ್ನು ಬದುಕಿನುದ್ದಕ್ಕೂ ಅವರು ಸಾರಿ ಹೇಳಿದರು ಎಂದರು.
ನರಬಲಿ ಕವನದಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಬೇಂದ್ರೆ ಕೆಲ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ಈ ಸಮಯದಲ್ಲಿ ಹುಟ್ಟಿದ ಕವನ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಎಂಬುದು ದೇಶ ಹಾಗೂ ಜನಸಾಮಾನ್ಯರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅವರು ಆಧ್ಯಾತ್ಮ ಹಾಗೂ ಕನ್ನಡದ ಬಗ್ಗೆ ಅತೀವ ಕಾಳಜಿ ಹೊಂದಿದ್ದರು ಎಂದು ಹೇಳಿದರು
ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ ಅವರು ಮಾತನಾಡಿ, ಕನ್ನಡ ಮತ್ತು ಮರಾಠಿ ಸಂಸ್ಕೃತಿಯ ಕೊಂಡಿಯಾದ ಬೇಂದ್ರೆ ಅವರ ವಿಚಾರಗಳು ಸೌಹಾರ್ದತೆ, ಸಾಮರಸ್ಯಕ್ಕೆ ಸದಾ ಆದರ್ಶವಾಗಿವೆ. ಮಾತೃಭಾಷೆ ಮರಾಠಿಯಾಗಿದ್ದರೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಧೀಮಂತ ಕವಿ ನಮ್ಮ ನೆಚ್ಚಿನ ಬೇಂದ್ರೆ ಅಜ್ಜರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಆರ್.ಆರ್.ಕೆ. ಸಮಿತಿ ಸದಸ್ಯ ಬಸವಕುಮಾರ್ ಮೀಸೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೀಲಕುಮಾರ್ ದೇಶಮುಖ, ಕಾಲೇಜು ಪ್ರಾಚಾರ್ಯೆ ಡಾ. ಪ್ರೇಮಾ ಹೂಗಾರ್, ಕನ್ನಡಪರ ಹೋರಾಟಗಾರ ಬಸವರಾಜ್ ಶಟಕಾರ್, ಶಿವಶಂಕರ್ ಟೋಕರೆ, ಡಾ. ವೈಜಿನಾಥ್ ಬುಟ್ಟೆ, ಗುರುನಾಥ್ ದೇಶಮುಖ, ಮಲ್ಲಿಕಾರ್ಜುನ್ ಟಂಕಸಾಲೆ, ಅಂಬಾದಾಸ್ ನಳಗೆ, ಅಮರಸ್ವಾಮಿ ಸ್ಥಾವರಮಠ್, ಗೋವಿಂದ್ ಪಾಟೀಲ್, ಬಾಲಾಜಿ ಹಲಬರ್ಗೆ, ಡಾ. ಶಿವಲಿಂಗ ಹೇಡೆ, ಡಾ. ಚಂದ್ರಕಾಂತ್ ಮೇತ್ರೆ, ಯುವರತ್ನ ಪ್ರಶಸ್ತಿ ಪುರಸ್ಕೃತ ಸುಧಾಕರ್ ಕೊಳ್ಳುರ್. ಕು. ಆರಾಧ್ಯ ಅಮರವಾಡಿ, ರೇಣುಕಾಸ್ವಾಮಿ ಬೇಂದ್ರೆ, ಉತ್ತಮ್, ಸಿಕಂದರ್ ಚೌವ್ಹಾಣ್, ತುಳಸಿರಾಮ್ ಮಾನೆ, ಕೈಲಾಸಪತಿ ಕೇದಾರೆ ಹಾಗೂ ರವಿ ಡೋಳೆ ಸೇರಿದಂತೆ ಇತರರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC