ತುಮಕೂರು: ನಂದಿಹಳ್ಳಿ–ಮಲ್ಲಸಂದ್ರ– ವಸಂತನರಸಾಪುರ ಬೈಪಾಸ್ ರಸ್ತೆ (ನಾಲ್ಕು ಪಥ) ನಿರ್ಮಾಣ ವಿರೋಧಿಸಿ, ಅಧಿಸೂಚನೆ ವಾಪಸ್ ಗೆ ಆಗ್ರಹಿಸಿ ಯೋಜನೆ ಪ್ರದೇಶದ 46 ಹಳ್ಳಿಗಳ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಂದಿಹಳ್ಳಿ—ಮಲ್ಲಸಂದ್ರ–ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದ ಟೌನ್ ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಳ್ಳಬಾರದು. ಅನ್ನ ನೀಡುವ ರೈತರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆ ಕೈಬಿಡದಿದ್ದರೆ ಹೋರಾಟ ಮುಂದುವರಿಸಲು ನಿರ್ಧರಿಸಿದರು.
ನಿಯಮದಂತೆ ಗ್ರಾಮ ಸಭೆ ಕರೆದು ಒಪ್ಪಿಗೆ ಪಡೆದುಕೊಳ್ಳಬೇಕು. ಸಾಮಾಜಿಕ ಪರಿಣಾಮದ ಬಗ್ಗೆ ಅಧ್ಯಯನ ನಡೆಸಬೇಕು. ಈಗಾಗಲೇ ಇರುವ ರಿಂಗ್ ರಸ್ತೆ ಅಭಿವೃದ್ಧಿಪಡಿಸಬೇಕು. ನಗರದಲ್ಲಿ ವಾಹನ ದಟ್ಟಣೆ ತಗ್ಗಿಸಲು ಪರ್ಯಾಯ ವ್ಯವಸ್ಥೆಗಳ ಬಗ್ಗೆ ತಜ್ಞರು, ರೈತ ಸಂಘಟನೆಗಳ ಪ್ರಮುಖರು, ಚಿಂತಕರ ಜತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಬೈಪಾಸ್ ರಸ್ತೆ ನಿರ್ಮಾಣವಾದರೆ 46 ಹಳ್ಳಿಗಳ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಾವಿರಾರು ಸಂಖ್ಯೆಯ ಬಡ ರೈತರು ಫಲವತ್ತಾದ ತುಂಡು ಜಮೀನು, ಮನೆ ಕಳೆದುಕೊಳ್ಳುತ್ತಾರೆ. ನೂರಾರು ಎಕರೆಗಳಲ್ಲಿ ಬೆಳೆದಿರುವ ತೆಂಗು, ಅಡಿಕೆ, ಮಾವು, ಬಾಳೆ ತೋಟಗಳು, ಕುರಿ ಮೇಕೆ ಸಾಕಣಿಕೆ ಘಟಕಗಳು, ತೆಂಗಿನಕಾಯಿ ಶೆಡ್‌ಗಳು ನಾಶವಾಗಲಿವೆ. ಸಿರಿಧಾನ್ಯ ಬೆಳೆಯುವ ಪ್ರದೇಶ ಮರೆಯಾಗಲಿದೆ. ಈ ಭಾಗದ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದು, ಜಮೀನು ಕಳೆದುಕೊಂಡು ಪರ್ಯಾಯವಾಗಿ ಬದುಕು ಕಟ್ಟಿಕೊಳ್ಳಲಾಗದೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಸಿಗುವ ಪರಿಹಾರದ ಪುಡಿಗಾಸಿನಲ್ಲಿ ಒಂದು ನಿವೇಶನ ಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ತೋಟ ಕಳೆದುಕೊಂಡರೆ ರೈತರ ಬದುಕು ನಾಶವಾಗಲಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ತುಮಕೂರಿನ ಹೊರವಲಯ ಕಾಂಕ್ರೀಟ್ ಕಾಡಾಗಲಿದೆ. ಬೈಪಾಸ್ ರಸ್ತೆ ಸುತ್ತಮುತ್ತಲಿನ ಜಮೀನು ವಾಣಿಜ್ಯ ಉದ್ದೇಶ, ಕಟ್ಟಡಗಳಿಗೆ ಬಲಿಯಾಗಲಿದೆ. ಬೈಪಾಸ್ ರಸ್ತೆಯ ವಾಸನೆ ಹಿಡಿದ ರಿಯಲ್ ಎಸ್ಟೇಟ್ ದಲ್ಲಾಳಿಗಳು ಈಗಾಗಲೇ ಜಮೀನು ಖರೀದಿಸಿ, ನಿವೇಶನ ನಿರ್ಮಾಣ, ವಾಣಿಜ್ಯ ಮಳಿಗೆ ಕಟ್ಟುವ ದಂಧೆ ಆರಂಭಿಸಿದ್ದಾರೆ. ಇದರ ಮಧ್ಯೆ ಸಂತ್ರಸ್ತರು ಬದುಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC