ಸರಗೂರು: ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುವ ವಿಚಾರ ‘ಸಾಮಾಜಿಕ ಮಾಧ್ಯಮ’ಗಳಲ್ಲಿ ಹೊರಬಂದ ಹಿನ್ನೆಲೆಯಲ್ಲಿ ತಾಲೂಕಿನ ಸಾಗರೆ ಗ್ರಾಮಕ್ಕೆ ತಹಶೀಲ್ದಾರ್ ಮೋಹನಕುಮಾರಿ ಅವರು ಮಂಗಳವಾರ ಭೇಟಿ ನೀಡಿ, ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ವಿಚಾರಣಾ ಸಭೆ ನಡೆಸಿದರು.
ಬಳಿಕ ವ್ಯಕ್ತಿಯೊಬ್ಬರಿಗೆ ಹಾಕಲಾಗಿದೆ ಎನ್ನಲಾಗುವ ‘ಬಹಿಷ್ಕಾರ’ ಎಂಬ ಆರೋಪ ಸತ್ಯಕ್ಕೆ ದೂರುವಾದುದು ಎಂಬ ಅಂಶ ಬೆಳಕಿಗೆ ಬಂದಿತು.
“ಗ್ರಾಮದಲ್ಲಿ ದೊಡ್ಡತಾಯಮ್ಮ, ಎಸ್.ಎಂ.ನಂಜೇಗೌಡ ಎಂಬವರು ವಾಸಿಸುತ್ತಿದ್ದು, ಸರ್ವೇ ನಂ. 436ರ ಸರಕಾರಿ ಖರಾಬು ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವುದು ಸರ್ವೇ ಇಲಾಖೆ ನಡೆಸಲಾದ ಆಳತೆಯಲ್ಲಿ ಕಂಡು ಬಂದಿರುತ್ತದೆ. ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಬೇಕಾಗಿರುವುದರಿಂದ ಎಸ್.ಎಂ.ನಂಜೇಗೌಡ, ದೊಡ್ಡತಾಯಮ್ಮ ಅವರ ಗಮನಕ್ಕೆ ತಂದಾಗ 3 ತಿಂಗಳ ಕಾಲಾವಧಿ ನೀಡಿ ನಂತರ ಬಿಟ್ಟುಕೊಡುವುದಾಗಿ ಹೇಳಿದರು. 3 ತಿಂಗಳ ಬಳಿಕ ಮನೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯ ರಕ್ಷಣೆಗಾಗಿ ‘ಬಹಿಷ್ಕಾರ’ ಎಂಬ ಪದ ಬಳಕೆ ಮಾಡಿಕೊಂಡಿದ್ದಾರೆ” ಎಂದು ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಗ್ರಾಮಸ್ಥರು ದೂರಿದರು.
ಸಭೆಯಲ್ಲಿ ವಾದಿ, ಪ್ರತಿವಾದಿಗಳ ದೂರು ಸ್ವೀಕರಿಸಿದ ತಹಶೀಲ್ದಾರ್ ಮೋಹನಕುಮಾರಿ ಅವರು, “ನಂಜೇಗೌಡ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’ ಹಾಕಲಾಗಿದೆಯೇ ಎಂಬುದರ ಬಗ್ಗೆ ಗ್ರಾಮಸ್ಥರಲ್ಲಿ ಮಾಹಿತಿ ಕಲೆಹಾಕಿದರು. ನಂಜೇಗೌಡ ಕುಟುಂಬದ ಪರ ಸಕಾರಾತ್ಮಕ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ‘ಸಾಮಾಜಿಕ ಬಹಿಷ್ಕಾರ’ ಎಂಬ ಆರೋಪ ಸುಳ್ಳು. ಸರಕಾರಿ ಖರಾಬು ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವುದು ಅಪರಾಧ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ರಕ್ಷಣೆಗಾಗಿ ಬಹಿಷ್ಕಾರ ಎಂಬ ಪದ ಬಳಕೆ ಮಾಡಿಕೊಳ್ಳುವುದೂ ಅಪರಾಧವೇ. ಜಮೀನು ವಿಚಾರ ಸಂಬಂಧ ಈಗಾಗಲೇ ಸರ್ವೇ ಸ್ಕೇಚ್ ಮಾಡಿಸಲಾಗಿದೆ. ಅಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಕುರಿತು ಫೈಲ್ ನೀಡಲಾಗಿದ್ದು, ಸಮಗ್ರ ವರದಿ ತರಿಸಿಕೊಳ್ಳಲಾಗುವುದು. ಮನೆ ನಿರ್ಮಾಣದ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಕ್ರಮವಹಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಬಹಿಷ್ಕಾರದ ನೆಪವೊಡ್ಡಿ ಕುಡಿಯುವ ನೀರಿಗೆ ಅಡ್ಡಿಪಡಿಸುವುದು. ಅಂಗಡಿಗಳಲ್ಲಿ ಧವಸ ಧಾನ್ಯಗಳನ್ನು ಕೊಡದಿರುವುದು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಯಾರೂ ಕೂಡ ಯಾರ ವಿರುದ್ಧವೂ ಅವಾಚ್ಯ ಶಬ್ದಗಳ ಬಳಕೆ ಸಲ್ಲದು. ಆದರೆ, ಗ್ರಾಮಸ್ಥರು ನಮಗೆ ಗೌರವ ಕೊಟ್ಟಿಲ್ಲ. ಮಾತುಕತೆ ಆಡಿಸುವುದಿಲ್ಲ ಎಂಬುದಕ್ಕೆ ಯಾರೂ ಹೊಣೆಯಲ್ಲ. ನಿಮ್ಮ ಗುಣ, ನಡೆತೆಯನ್ನು ನೋಡಿ ಅವರು ನಿಮಗೆ ಗೌರವ ಕೊಡುತ್ತಾರೆ. ಹೀಗಾಗಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನುವುದು ಸುಳ್ಳು” ಎಂದು ಅವರು ವಿವರಿಸಿದರು. ಬಳಿಕ ಗ್ರಾಮಸ್ಥರಲ್ಲಿ ಮಹಜರು ಪತ್ರ ಬರೆಯಿಸಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್.ನವೀನ್‌ಗೌಡ, ಆರ್‌ಐಗಳಾದ ಲಕ್ಷ್ಮಣಶೆಟ್ಟಿ, ಮುಜೀಬ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC