ಸರಗೂರು: ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಮತ್ತೊಂದು ಹುಲಿಯ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಸೋಮವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ, ಹುಲಿ ಕುರುಹು ಪತ್ತೆಯಾಗಿಲ್ಲ.
ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ ಹಿಡಿದ ಬೆನ್ನಲೇ ಶನಿವಾರ ರಾತ್ರಿ ಮತ್ತೊಂದು ಹುಲಿ ಶಬ್ದ ಗ್ರಾಮಸ್ಥರಿಗೆ ಕೇಳಿತ್ತು. ವಿಷಯವನ್ನು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಾಗ ಶನಿವಾರ ತಡರಾತ್ರಿ ಮೂರು ಗಂಟೆವರೆಗೂ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಶಬ್ಧವಾಗಲೀ, ಹುಲಿ ಇರುವ ಕುರುಹು ಆಗಲೀ ಸಿಗಲಿಲ್ಲ. ತಡರಾತ್ರಿ ನಾಲ್ಕು ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ, ಸೋಮವಾರ ಬೆಳಗ್ಗೆಯಿಂದಲೇ ಮೂರು ಸಾಕಾನೆಗಳಾದ ಭೀಮ, ಮಹೇಂದ್ರ, ಭಗೀರಥ ಆನೆಗಳನ್ನು ಬಳಸಿಕೊಂಡಿ ಗ್ರಾಮದ ಜಮೀನು, ಕೆರೆ ಸೇರಿದಂತೆ ಅರಣ್ಯದಂಚಿನಲ್ಲಿ ಕೂಂಬಿಂಗ್ ನಡೆಸಿದರು.
ನುಗು ವನ್ಯಜೀವಿ ವಲಯ, ಬೇಗೂರು, ಹೆಡಿಯಾಲ, ಗುಂಡ್ರೆ, ಐನೂರು ಮಾರಿಗುಡಿ ವಲಯದಿಂದ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಗಳು ತಂಡ ರಚಿಸಿಕೊಂಡು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಡೆಸಿದರು.
ಭಾನುವಾರ ರಾತ್ರಿಯೂ 8 ಮಂದಿ 2 ತಂಡ ರಚಿಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ನಡೆಸಲಿದ್ದಾರೆ. ಮೂರು ಆನೆಗಳು, ಅರವಳಿಕೆ ತಜ್ಞರಾದ ಡಾ.ವಾಸೀ ಮಿರ್ಜಾ, ಡಾ.ರಮೇಶ್, ಶಾರ್ಪ್ ಶೂಟರ್ ರಂಜನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಶಬ್ಧ ಕೇಳಿದರೆ ಮತ್ತೆ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಮಂಗಳವಾರವೂ ಕಾರ್ಯಾಚರಣೆ ನಡೆಸಲಾಗುವುದು ಎಂದು ನುಗು ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿವೇಕ್ ತಿಳಿಸಿದರು.
ಹುಲಿ ಸೆರೆಗಾಗಿ ಕೂಂಬಿಂಗ್ ಮಾಡುವ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಯಾರೂ ಜಮೀನಿನತ್ತ ಹೋಗಬಾರದು. ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ನುಗು ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿವೇಕ್ ಅವರು ಬಡಗಲಪುರ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಇದಲ್ಲದೆ ಹುಲಿ ಶಬ್ಧದ ಬಗ್ಗೆ ಮಾಹಿತಿ ಕಲೆಹಾಕಿದರು.
ಆರ್ ಎಫ್ ಓಗಳಾದ ವಿವೇಕ್, ವೈರಮುಡಿ, ರಾಜೇಶ್, ಅಮೃತೇಶ್, ರಾಮಾಂಜನೇಯ, ಅಮೃತಾ, ಮುನಿರಾಜು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಹುಲಿ ದಾಳಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡಗಲಪುರ ಗ್ರಾಮದ ಮಹದೇವಗೌಡ ಅವರ ಮನೆಗೆ ಭೇಟಿ ನೀಡಿದ ನುಗು ವಲಯದ ಆರ್ ಎಫ್ ಓ ವಿವೇಕ್ ಅವರು ಮಾದೇಗೌಡ ಪತ್ನಿ ಅವರಿಗೆ ಅರಣ್ಯ ಇಲಾಖೆಯಿಂದ ಕೊಡಮಾಡುವ 50 ಸಾವಿರ ರೂ. ಧನ ಸಹಾಯ ನೀಡಿದರು. ಗಂಗಾಧರ್, ಗ್ರಾಮಸ್ಥರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC