ರೈತರ ಬಳಿ ಹಣ ಕೇಳಿರುವ ಆಡಿಯೋ ಆರೋಪದಡಿ ಔರಾದ್ ತಾಲ್ಲೂಕಿನ ವಡಗಾಂವ(ದೇ) ಗ್ರಾಮದ ಗ್ರಾಮ ಲೆಕ್ಕಿಗ ನಾಮದೇವ ಮೇತ್ರೆ ಅವರನ್ನು ಅಮಾನತು ಮಾಡಲಾಗಿದೆ.
ರೈತರ ವಿವಿಧ ರೀತಿಯ ಕಡತಗಳನ್ನು ಮತ್ತು ಜನನ ಪ್ರಮಾಣ ಪತ್ರಗಳ ಪಂಚನಾಮ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಪತ್ರ ಹಾಗೂ ಲಂಚ ಕೇಳಿರುವ ಆಡಿಯೋ ವೈರಲ್ ಆದ ಹಿನ್ನೆಲೆ ಶಿಸ್ತು ಪ್ರಾಧಿಕಾರ ಹಾಗೂ ಬೀದರ್ ಸಹಾಯಕ ಆಯುಕ್ತ ಎಂ.ಡಿ.ಶಕೀಲ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಸದರಿ ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಲಿಖಿತ ಸಮಜಾಯಿಸಿ ಉತ್ತರ ನೀಡಿದ ನೌಕರ ʼನನ್ನ ಕರ್ತವ್ಯದಲ್ಲಿ ಯಾವುದೇ ವಿಳಂಬ ಮಾಡಿರುವುದಿಲ್ಲ, ಯಾರ ಬಳಿಯೂ ಹಣ ಕೇಳಿಲ್ಲʼ ಎಂದು ಉತ್ತರಿಸಿದರು. ಗ್ರಾಮಸ್ಥರು ನೀಡಿದ ದೂರಿನ್ವಯ ಔರಾದ್ ತಹಸೀಲ್ದಾರ್ ಅವರು ಸದರಿ ನೌಕರ ವಿರುದ್ಧ ಸಿಸಿಎ ನಿಯಮಾವಳಿ ಪ್ರಕಾರ ಶಿಸ್ತು ಕ್ರಮಕೈಗೊಳ್ಳಲು ಸಲ್ಲಿಸಿದ ಪ್ರಸ್ತಾವನೆ ವರದಿ ಆಧರಿಸಿ ಅಮಾನತು ಮಾಡಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 98ರ ಅನುಸಾರ ಸದರಿ ಸಿಬ್ಬಂದಿಯವರು ಜೀವನ ಆಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಸದರಿ ಸಿಬ್ಬಂದಿಯವರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC