ಬೆಂಗಳೂರು: ಬಿಹಾರ ಚುನಾವಣೆಗಾಗಿ ಕರ್ನಾಟಕದಲ್ಲಿ ಸಚಿವರು ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಬಿಜೆಪಿಯ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ರಾಜ್ಯದ ಸಂಪನ್ಮೂಲಗಳನ್ನು ‘ಹೈಕಮಾಂಡ್ ಗೆ ತಿರುಗಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ’ ಮತ್ತು ‘ಕಾಂಗ್ರೆಸ್‌ಗೆ ಅಲ್ಲ’ ಎಂದು ಮಂಗಳವಾರ ಹೇಳಿದ್ದಾರೆ.
‘ಎಕ್ಸ್’ನಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿರುವ ಖರ್ಗೆ, ‘ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಯಡಿಯೂರಪ್ಪನವರು ಹಾಗೂ ದಿವಂಗತ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ? ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ’ ಎಂದಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ ಎಂದು ಬರೆದಿದ್ದಾರೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ 60, 70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು ಎಂದಿದ್ದಾರೆ.
ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ಕಿಡಿಕಾರಿದ್ದಾರೆ. ಸೋಮವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ ಖರ್ಗೆ, ಪ್ರವಾಹ ಪರಿಹಾರ ನಿಧಿ ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC