ಬೆಂಗಳೂರು: ಇನ್ನು ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿಯನ್ನು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿರುವ ಸಚಿವ ವಿ.ಸೋಮಣ್ಣ, ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿಯನ್ನು ಅಭಿವೃದ್ಧಿ ಪಡಿಸಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೆರವು ಕೊಡಬೇಕು ಎಂದರು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲುಗಳ ಸಮರ್ಪಕ ನಿರ್ವಹಣೆ ಮಾಡಬೇಕಿದೆ. ಚೆನ್ನಮ್ಮನ ಜೀವನ ಮತ್ತು ಯಶೋಗಾಥೆಯನ್ನು ಎಲ್ಲ ಭಾಷೆಯಲ್ಲಿ ಪುಸ್ತಕ ಹೊರ ತರಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕಿತ್ತೂರು ಸಂಸ್ಥಾನದ ಸ್ವಾಭಿಮಾನ ಮತ್ತು ಕನ್ನಡ ನಾಡಿನ ಹೆಮ್ಮೆಯ ಸಂಕೇತವಾದ ಕಿತ್ತೂರು ರಾಣಿ ಚೆನ್ನಮ್ಮನವರು ನಾಡು–ನುಡಿ ಮತ್ತು ದೇಶಕ್ಕೆ ನೀಡಿದ ಕೊಡುಗೆ ತಮಗೆ ತಿಳಿದ ವಿಚಾರವಾಗಿದೆ.
ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಇಂದು ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಪರಮಪೂಜ್ಯ ಸ್ವಾಮಿಗಳು, ಜನಪ್ರತಿನಿಧಿಗಳು, ದೆಹಲಿ ಕನ್ನಡಿಗರು ಭಾಗಿಯಾಗಿ ರಾಣಿ ಚೆನ್ನಮ್ಮನವರ ವಿಜಯೋತ್ಸವದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆಂದು ಅತ್ಯಂತ ಹೆಮ್ಮೆಯಿಂದ ತಿಳಿಸಬಯಸುತ್ತೇನೆ.
ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ.
ಬೈಲಹೊಂಗಲದಲ್ಲಿರುವ ರಾಣಿ ಚೆನ್ನಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ನಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC