ನೆಲಮಂಗಲ: ಸರ್ಕಾರವೇ ಪರೀಕ್ಷಾ ಶುಲ್ಕ ವಿನಾಯಿತಿ ನೀಡಿದ್ದರೂ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ ಗಂಭೀರ ಆರೋಪದ ಮೇಲೆ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ದ್ವಿತೀಯ ದರ್ಜೆ ಸಹಾಯಕ (SDA) ಸಿದ್ದಲಿಂಗಮೂರ್ತಿ ಆರ್. ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ (ಬೆಂಗಳೂರು ಗ್ರಾಮಾಂತರ) ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರೇಗೌಡ ಈ ಅಕ್ರಮದ ಬಗ್ಗೆ ದೂರು ದಾಖಲಿಸಿದ್ದರು. 2025ರ ಎಸ್ ಎಸ್ ಎಲ್ ಸಿ ಪರೀಕ್ಷೆ–1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ–2 ಮತ್ತು ಪರೀಕ್ಷೆ–3ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಶುಲ್ಕ ವಿನಾಯಿತಿ ನೀಡಿತ್ತು. ಆದಾಗ್ಯೂ, ಆರೋಪಿ ನೌಕರ ಸಿದ್ದಲಿಂಗಮೂರ್ತಿ, ಪರೀಕ್ಷೆ–2 ಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ ₹1200 ಮತ್ತು ಪರೀಕ್ಷೆ–3 ಕ್ಕಾಗಿ ₹20 ರಂತೆ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿರುವುದು ದೂರಿನಲ್ಲಿ ಆರೋಪಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ವಿದ್ಯಾರ್ಥಿಗಳ ಲಿಖಿತ ಹೇಳಿಕೆಗಳು, ವಿಡಿಯೋ ಸಾಕ್ಷ್ಯಗಳು (ಡಿ.ವಿ.ಡಿ) ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದೆ.
ವಿಶೇಷವೆಂದರೆ, ಇದೇ ನೌಕರನ ವಿರುದ್ಧ 2024ನೇ ಸಾಲಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷಾ ನೋಂದಣಿ ವೇಳೆ ಹೆಚ್ಚುವರಿ ಶುಲ್ಕ ಪಡೆದ ಆರೋಪವಿದ್ದು, ಆ ಕುರಿತು ಈಗಾಗಲೇ ಇಲಾಖಾ ವಿಚಾರಣೆ ಪ್ರಗತಿಯಲ್ಲಿದೆ. ಅಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಲೋಕಾಯುಕ್ತದಲ್ಲಿಯೂ (ಪ್ರಕರಣ ಸಂಖ್ಯೆ : COMPT/UP LOK/BD/787/2024) ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ದೂರನ್ನು ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರೇಗೌಡ ದಾಖಲಿದ್ದಾರೆ.
ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ ಆರೋಪ, ಕರ್ತವ್ಯಲೋಪ ಮತ್ತು ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆಯು, ತನಿಖೆಯನ್ನು ಕಾಯ್ದಿರಿಸಿ, ಆರೋಪಿ ನೌಕರನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಅದರಲ್ಲೂ ಈತ ದಲಿತ ಸಮುದಾಯದ ಮಕ್ಕಳನ್ನೇ ಟಾರ್ಗೆಟ್ ಮಾಡಿ ಆ ಮಕ್ಕಳ ಬಳಿ ಹೆಚ್ಚಿಗೆ ಹಣ ಪಿಕುತ್ತಿದ್ದ ಎನ್ನಲಾಗಿದೆ, ಮಕ್ಕಳ ಪರ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ಕೆ.ಆರ್.ಶಂಕರ್ ಗೌಡ್ರು ಹೋರಾಟ ಕೊನೆಗೂ ಜಯವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



