ಸರಗೂರು: ಕಾಡಾನೆ ದಾಳಿಯಿಂದಾಗಿ ಸುಮಾರು 2 ಎಕರೆ ಬಾಳೆ ಕೃಷಿ ಸಂಪೂರ್ಣ ನಾಶಗೊಂಡ ಘಟನೆ ಹೂವಿನಕೊಳದಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಕೊಳ ಗ್ರಾಮದ ರೈತ ನಾಗೇಂದ್ರ ಎಚ್.ಎನ್. ಅವರಿಗೆ ಸೇರಿದ ಬಾಳೆ ತೋಟ ನಾಶವಾಗಿದೆ. ಸುಮಾರು 2 ಎಕರೆ ಜಮೀನಿನಲ್ಲಿ 2 ಸಾವಿರ ಬಾಳೆ ಬೆಳೆದಿದ್ದರು. ಕಾಡಾನೆಗಳ ದಾಳಿಗೆ ಸುಮಾರು 500 ಬಾಳೆ ಗಿಡಗಳು ನಾಶವಾಗಿದ್ದು, ₹ 5 ಲಕ್ಷ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಒಂದು ಬಾಳೆ ಸಸಿಗೆ ₹ 25 ಕೊಟ್ಟು ನರ್ಸರಿಯಿಂದ ತಂದು ಬೇಸಾಯ ಮಾಡಲಾಗಿದೆ. ಒಂದು ಗಿಡ ಬಾಳೆ ಬೆಳೆಯಲು ಸುಮಾರು ₹ 400 ಖರ್ಚಾಗಿದ್ದು, ಉತ್ತಮ ಫಸಲು ಬಂದಿದ್ದರಿಂದ ಒಂದು ಗೊನೆಗೆ ₹ 1,000 ಸಿಗುತ್ತಿತ್ತು. ಒಂದು ತಿಂಗಳ ಹಿಂದೆ ಇದೇ ಬಾಳೆ ತೊಟಕ್ಕೆ ಆನೆಗಳು ನುಗ್ಗಿ ಸ್ವಲ್ಪ ಬೆಳೆಯನ್ನು ನಾಶ ಮಾಡಿದ್ದವು. ಈಗ ಎರಡನೇ ಬಾರಿಗೆ ಮತ್ತೆ ದಾಳಿ ನಡೆಸಿವೆ. ಮುಂದೆಯೂ ಆನೆಗಳು ದಾಳಿ ಇಡುವ ಸಾಧ್ಯತೆಯಿದೆ ಎಂದು ನೋವು ತೋಡಿಕೊಂಡರು.
ಎಚ್.ಎನ್.ನಾಗೇಂದ್ರ ಎಂಬವರಿಗೆ ಸೇರಿದ ಬಾಳೆ ತೋಟಕ್ಕೆ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಬಾಳೆ ಕೃಷಿ ಮಾಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ಕಟಾವು ಮಾಡಲು ಸಿದ್ಧಗೊಂಡಿತ್ತು. ಆದರೆ ಕಾಡಾನೆಗಳ ದಾಂಧಲೆಯಿಂದ ಸುಮಾರು 5ಲಕ್ಷಕ್ಕೂ ಅಧಿಕ ಬೆಲೆಬಾಳುವ ಫಸಲು ನಾಶಗೊಂಡಿದೆ. ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಬಾಳೆ ತೋಟದ ಮಾಲೀಕರು ಆಗ್ರಹಿಸಿದ್ದಾರೆ.
‘ಕಾಡಾನೆಗಳಿಂದ ಬಾಳೆ ನಾಶವಾಗಿರುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಲು ಮುಂದಾಗಿಲ್ಲ. ಒಂದು ಗಿಡಕ್ಕೆ ₹ 100 ರಂತೆ ಪರಿಹಾರ ಸಿಗಲಿದೆ. ನಷ್ಟವಾಗಿರುವ ಸಂಬಂಧ ಇಲಾಖೆಗೆ ಅರ್ಜಿ ಹಾಕುವಂತೆ ಹೇಳಿದ್ದಾರೆ. ಅರ್ಜಿ ಹಾಕಿ ಪರಿಹಾರ ಪಡೆಯಬೇಕಾದರೆ ನಮಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತದೆ. ಮತ್ತೆ ನಮಗೇನು ಸಿಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಲಾಕ್ ಡೌನ್ ಸಮಯದಲ್ಲಿ ಸುಮಾರು ಮಂದಿ ಬೆಂಗಳೂರಿನಿಂದ ವಾಪಸ್ ಹಳ್ಳಿಗೆ ಬಂದು ವ್ಯವಸಾಯ ಮಾಡುತ್ತಿದ್ದಾರೆ. ನಾಗೇಂದ್ರ ಎಚ್.ಎನ್. ಯುವ ರೈತನಾಗಿದ್ದು, ಪ್ರಗತಿಪರ ರೈತನಾಗಬೇಕೆಂದು ಬಾಳೆ ಬೇಸಾಯ ಮಾಡಿದ್ದಾರೆ. ಕಾಡಾನೆಗಳು ಅವರು ಬೆಳೆದ ಬೆಳೆಯನ್ನು ನಾಶ ಮಾಡಿವೆ. ಅರಣ್ಯ ಇಲಾಖೆಯವರು ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ನಾವು ಬೇರೆ ಕಡೆ ಇದ್ದವು ಎಂದು ಸಾಬಾಬು ನೀಡುತ್ತಿದ್ದಾರೆ ಎಂದರು.ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಗ್ರಾಪಂ ಸದಸ್ಯ ಎಚ್.ಡಿ. ಮಹೇಶ್ ಒತ್ತಾಯಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



