ಸರಗೂರು: ತಾಲೂಕಿನ ಮುಳ್ಳೂರು ಸಮೀಪದ ಬೆಣ್ಣೆಗೆರೆಯ ರಾಜಶೇಖರ್ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆಯೇ ಮುಳ್ಳೂರಿನಿಂದ ಸುಮಾರು 10 ಕಿ.ಮೀ. ದೂರದ ಹೀರೇಗೌಡನಹುಂಡಿ ಸಮೀಪ ಜಮೀನಿನಲ್ಲಿ ಹುಲಿಯೊಂದು ಪತ್ತೆಯಾಗಿದ್ದು, ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ರಾಜಶೇಖರ್ ಅವರನ್ನು ಬಲಿ ಪಡೆದಿದ್ದ ಹುಲಿಯ ಸೆರೆಗೆ ಮಂಗಳವಾರವೂ ರೋಹಿತಾ, ಭೀಮಾ, ಮಹೇಂದ್ರ ಸಾಕಾನೆಗಳ ಮೂಲಕ ಬಂಡೀಪುರ ಅರಣ್ಯ ವ್ಯಾಪ್ತಿಯ ನುಗು, ಕಲ್ಕರೆ, ಯಡಿಯಾಲ ಉಪ ವಿಭಾಗದ ಸುಮಾರು 130ಕ್ಕೂ ಅಧಿಕ ಸಿಬ್ಬಂದಿ ಕೂಂಬಿಂಗ್ ಆರಂಭಿಸಿ ಹಂತಕ ಹುಲಿಗಾಗಿ ತೀವ್ರಶೋಧ ನಡೆಸುತ್ತಿರುವಾಗಲೇ, ಬೆಳಗ್ಗೆ ಸುಮಾರು 11 ಗಂಟೆಗೆ ವೇಳೆಗೆ ಸಮೀಪದ ಹೀರೇಗೌಡನ ಹುಂಡಿ ಬಳಿ ಸತೀಶ್ ಎಂಬವರ ಜಮೀನಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ರೈತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆತಂದ ಅರಣ್ಯ ಇಲಾಖೆ ಹುಲಿಗಾಗಿ ಶೋಧ ಆರಂಭಿಸಿದೆ. ಬಳಿಕ ಹುಲಿ ಚಲನವಲನಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿಯು ಸಂಜೆ ಸುಮಾರು 6 ಗಂಟೆ ವೇಳೆ ಹುಲಿಯು ಸಮೀಪದ ಹನುಮಂತನಗರ ಎಂಬಲ್ಲಿ ಪತ್ತೆಯಾಗಿರುವ ಖಚಿತ ಮಾಹಿತಿ ಮಾಹಿತಿ ಮೇರೆಗೆ ಸಾಕಾನೆ ಮೂಲಕ ತೆರಳಿದ ಡಾ.ರಮೇಶ್ ಹಾಗೂ ಡಾ.ವಸೀಂ ಮಿರ್ಜಾ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಸೆರೆಯಾದ ಹುಲಿ ಭಾನುವಾರ ರೈತನ ಮೇಲೆ ದಾಳಿ ಮಾಡಿ ಬಲಿ ಪಡೆದ ಹುಲಿಯೋ ಅಥವಾ ಇದು ಬೇರೆ ಹುಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಸೆರೆಯಾಗಿರುವ ಹುಲಿ ಸುಮಾರು 6 ವರ್ಷದ ಹೆಣ್ಣು ಹುಲಿಯಾಗಿದ್ದು, ಹುಲಿಯು ಯಾವುದೇ ಗಾಯವಿಲ್ಲದೆ ಆರೋಗ್ಯಕರವಾಗಿದೆ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.
ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ:
ಇದೇ ವೇಳೆ ಮಂಗಳವಾರ ಬೆಳಗ್ಗೆ ಮುಳ್ಳೂರಿಗೆ ಭೇಟಿ ನೀಡಿದ ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತನ ಮೇಲೆ ಹುಲಿ ದಾಳಿಯಾಗಿರುವ ದುಃಖಕರ ವಿಚಾರ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, ಸ್ಥಳೀಯರು ಅದಕ್ಕೆ ಸಹಕಾರ ನೀಡಬೇಕು. ಯಾರೂ ಆತಂಕಕ್ಕೊಳಗಾಗುವುದು ಬೇಡ. ಮಾನವ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ದಾಳಿಗೊಳಗಾದ ರೈತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಹುಲಿಗಾಗಿ ಕಾದು ಕುಳಿತ ಜನ:
ಇನ್ನು ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಜನರನ್ನು ನಿಭಾಯಿಸುವ ಜತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಬೇಕಾದ ಅನಿರ್ವಾತೆ ಎದುರಾಯಿತು. ಅರಣ್ಯ ಇಲಾಖೆಗೆ ಸರಗೂರು ಠಾಣಾ ಪೊಲೀಸರು ಸಹಕಾರ ನೀಡಿದರು.
ಜಮೀನಿನಲ್ಲಿ ಓಡುವ ದೃಶ್ಯ ಸೆರೆ:
ಇನ್ನು ಹುಲಿ ಹಿಡಿಯಲು ಸಾಕಾನೆಗಳ ಮೂಲಕ ಬರುವಾಗ ಪೊದೆಯಲ್ಲಿ ಅವಿತಿದ್ದ ಹುಲಿ ಸಾಕಾನೆಗಳನ್ನು ಕಂಡು ಗಾಬರಿಗೊಂಡು ಬಾಳೆ ತೋಟವೊಂದಕ್ಕೆ ಓಡುವ ದೃಶ್ಯ ಸೆರೆಯಾಗಿತ್ತು. ಕೂಂಬಿಂಗ್ ನೋಡಲು ಬಂದು ಮರವೇರಿ ಕುಳಿತಿದ್ದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಡಿಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಆರ್ ಎಫ್ ಒಗಳಾದ ವಿವೇಕ್, ಮುನಿರಾಜು, ರಾಜೇಶ್ ಹಾಜರಿದ್ದರು.
ಸುಳ್ಳು ಸಂದೇಶ ರವಾನೆ:
ಇದ್ದಕ್ಕಿದಂತೆ ಮಂಗಳವಾರ ಮೂರು ಹುಲಿಗಳು ಮಲಗಿರುವ ಬ್ಲಾಕ್ ಅಂಡ್ ವೈಟ್ ಡ್ರೋನ್ ನಲ್ಲಿ ಸೆರೆಯಾದ ಚಿತ್ರ ಹಾಗೂ ನೀರಿನಲ್ಲಿ ತಾಯಿ ಮತ್ತು ಎರಡು ಮರಿಗಳು ಕುಳಿತಿರುವ ಹುಲಿಯ ಚಿತ್ರವೊಂದು ಮುಳ್ಳೂರಿನಲ್ಲಿ ರೈತನನ್ನ ಬಲಿ ಪಡೆದ ಹುಲಿ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಬಳಿಕ ಈ ವಿಚಾರ ಅರಣ್ಯ ಇಲಾಖೆಯ ಗಮನಕ್ಕೆ ಬಂದು ಇದು ನುಗು ವಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂದು ಇಲಾಖೆ ಖಚಿತ ಪಡಿಸಿದೆ.
ಸಾರ್ವಜನಿಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಕೊಡದೆ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಹೆಡಿಯಾಲ ಉಪ ವಿಭಾಗದ ಎಸಿಎಫ್ ಡಿ.ಪರಮೇಶ್ ಮನವಿ ಮಾಡಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



