ಶಿರಾ: ತಾಲೂಕಿನ ಪ್ರಮುಖ ಬೆಳೆಯಾಗಿರುವ ಶೇಂಗಾ ಮಳೆಯಾಗದ ಹಿನ್ನೆಲೆ ಇಳುವರಿ ಕುಂಠಿತಗೊಂಡಿದೆ. ಪ್ರತಿ ಬಾರಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಶೇಂಗಾ ಬಿತ್ತನೆ ಕಡಿಮೆಯಾಗಿದೆ. 25,040 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿ ಇದ್ದರೂ ಕೇವಲ 15,715 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಅರ್ಧ ಭಾಗ ಮಳೆಯಾಗದ ಕಾರಣ ರೈತರು ಶೇಂಗಾ ಬದಲು ರಾಗಿಯತ್ತ ಒಲವು ತೋರಿದ್ದು, 12,913 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆಯಾಗಿದೆ.
ಶೇಂಗಾ ಬಿತ್ತನೆಯ ಸಮಯದಲ್ಲಿ ಮಳೆ ಬಂದಿದ್ದು ಬಿಟ್ಟರೆ ನಂತರ ಎರಡು ತಿಂಗಳು ಮಳೆ ಇಲ್ಲದೆ ಗಿಡ ಒಣಗುವಂತಾಗಿತ್ತು. ಕೆಲವೆಡೆ ಎಲೆ ಚುಕ್ಕೆ ರೋಗದಿಂದ ಗಿಡಗಳು ಒಣಗಿ ಅವುಗಳನ್ನು ಕೀಳಲು ಹರಸಾಹಸ ಪಡುವಂತಾಯಿತು.
ಈಗಾಗಲೇ ಶೇ 80ರಷ್ಟು ಶೇಂಗಾ ಕಟಾವು ಮುಗಿದಿದೆ. ಅಕ್ಟೋಬರ್ ತಿಂಗಳಲ್ಲಿ ಸತತ ಮಳೆಯಿಂದಾಗಿ ಶೇಂಗಾ ಬಿಡಿಸಲು ಸಾಧ್ಯವಾಗದೆ ಕೆಲವೆಡೆ ಬಣವೆ ಮಾಡಿ ಟಾರ್ಪಲ್ ಮುಚ್ಚಿದ್ದಾರೆ. ಮಳೆ ಮುಂದುವರೆದರೆ ಕಟಾವು ಮಾಡದೆ ಇರುವ ಶೇಂಗಾ ಸಹ ಭೂಮಿಯಲ್ಲಿ ಮೊಳಕೆ ಬರುವ ಸಾಧ್ಯತೆ ಇದೆ.
ಇಳುವರಿ ಕುಂಠಿತ: ರೈತರು ಕಷ್ಟಪಟ್ಟು ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಎಕರೆಗೆ 730 ರಿಂದ 735 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಇಳುವರಿ ಕುಸಿತವಾಗಿದೆ. ಎಕರೆಗೆ ಎಂಟು ಕ್ವಿಂಟಲ್ ಬರಬೇಕಿದ್ದ ಶೇಂಗಾ ಇಳುವರಿ, ಒಂದೂವರೆ ಕ್ವಿಂಟಲ್‌ನಿಂದ ಮೂರು ಕ್ವಿಂಟಲ್‌ಗೆ ಸೀಮಿತವಾಗಿದ್ದು, ರೈತರು ಖರ್ಚು ಮಾಡಿದ ಹಣ ಸಹ ಕೈಗೆ ಸಿಗದಂತಾಗಿದೆ.
ಶೇಂಗಾ ಬೆಳೆ ನಂಬಿ ಸಾಲ ಮಾಡಿ ಸಂಕಷ್ಟಕ್ಕೆ ಗುರಿಯಾಗಿರುವವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


