ಬೀದರ್: ಜಿಲ್ಲೆಯ ಗ್ರಾಮ ಪಂಚಾಯತಿ ಚುನಾಯಿತ ಅಧ್ಯಕ್ಷರ ಅಧಿಕಾರ ಚಲಾಯಿಸಿದ ಆರೋಪದಡಿ ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮ ಪಂಚಾಯತ್ ಪಿಡಿಒ ಮಹಾಲಕ್ಷ್ಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ಅವರು ಆದೇಶ ಹೊರಡಿಸಿದ್ದಾರೆ.
‘ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯನ್ನು ಕಾನೂನು ಬಾಹಿರವಾಗಿ/ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ನಿಯಮಗಳನ್ನು ಉಲ್ಲಂಘಿಸಿ ಸಾಮಾನ್ಯ ಸಭೆಯನ್ನು ಜರುಗಿಸಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜೇಮ್ಸ್ ಅವರು ದೂರು ಸಲ್ಲಿಸಿದ್ದರು.
ಪಂಚಾಯತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳದೆ ಅಧ್ಯಕ್ಷೆ, ಪಿಡಿಒ ಇಬ್ಬರೂ ಸೇರಿ ಸರ್ಕಾರದ ಹಣ ಲೂಟಿ ಮಾಡಿರುವುದಾಗಿ ಮತ್ತು ಗ್ರಾ.ಪಂ. ನಡವಳಿಯನ್ನು ಮನಸ್ಸಿಗೆ ಬಂದಂತೆ ಪಾಸು ಮಾಡಿರುವುದಾಗಿ ಹಾಗೂ ಸದರಿ ವಿಷಯದ ಕುರಿತು ವಿಚಾರಿಸಿದಾಗ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಉಪಾಧ್ಯಕ್ಷ ಸೈಯದ್ ಶರಫೋದೀನ್ ಅವರು ದೂರು ಸಲ್ಲಿಸಿದ್ದರು.
ಈ ದೂರಿನ್ವಯ ಜಿ.ಪಂ.ಆಡಳಿತ ವಿಭಾಗದ ಸಹಾಯಕ ನಿರ್ದೇಶಕ (ಆಡಳಿತ) ಜಯಪ್ರಕಾಶ ಚವ್ಹಾಣ ಮತ್ತು ಗ್ರಾ.ಪಂ.ವಿಷಯ ನಿರ್ವಾಹಕ ಹಣಮಂತ ಚಿದ್ರಿ ಅವರು ಜಂಟಿಯಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲಿಸಿದರು.
‘2021ರಿಂದ ಮಹಾಲಕ್ಷ್ಮಿ ಅವರು ಹೆಡಗಾಪೂರ ಗ್ರಾಮ ಪಂಚಾಯತಿಯ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ನಿಯಮಿತವಾಗಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳನ್ನು ಜರುಗಿಸಲು ಕ್ರಮ ಕೈಗೊಂಡಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆ ಕರೆಯುವಂತೆ ತಿಳಿಸಿದರೂ ಪಿಡಿಒ ಅವರು ಗ್ರಾ.ಪಂ.ಸಾಮಾನ್ಯ ಸಭೆಗಳನ್ನು ಕರೆಯದೆ ತಮಗೆ ಅನುಕೂಲವಾದಾಗ ಮಾತ್ರ ಸಭೆ ಕರೆಯುತ್ತಾರೆ. ಇದರಿಂದ ನನ್ನ ಅಧ್ಯಕ್ಷೆ ಪದವಿಗೆ ಬೆಲೆ ಇಲ್ಲದಂತಾಗಿದೆ. ನಾನು ದಲಿತ ಮಹಿಳಾ ಅಧ್ಯಕ್ಷೆ ಎನ್ನುವ ಕಾರಣದಿಂದ ಪಿಡಿಒ ಅವರು ನನಗೆ ಗೌರವ ಕೊಡುತ್ತಿಲ್ಲ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಜೇಮ್ಸ್ ಅವರು ಗಂಭೀರ ಆರೋಪ ಮಾಡಿರುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ
ಪಂಚಾಯತಿಯ ಸಾಮಾನ್ಯ ಸಭೆಯ ನಿರ್ಣಯ ಪುಸ್ತಕಗಳು ಪರಿಶೀಲಿಸಿದಾಗ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಇರದಿದ್ದರೂ ಪಿಡಿಒ ಅವರು ಗ್ರಾ.ಪಂ.ಉಪಾಧ್ಯಕ್ಷರನ್ನು ಸಭೆಯ ಅಧ್ಯಕ್ಷರನ್ನಾಗಿ ಮಾಡಿ ಸಭೆ ನಡೆಸಿ ಕರ್ತವ್ಯ ಲೋಪ ಹಾಗೂ ಪಂಚಾಯತ ರಾಜ್ ಅಧಿನಿಯಮದ ನಿಯಮಗಳಿಗೆ ವಿರುದ್ಧವಾಗಿ ನಡೆದಿರುವುದು ದುರುದ್ದೇಶದ ವರ್ತನೆಯಾಗಿದೆ’ ಎಂದು ಪರಿಶೀಲನಾ ವರದಿಯಿಂದ ತಿಳಿದುಬಂದಿದೆ.
ಚುನಾಯಿತ ಗ್ರಾ.ಪಂ.ಅಧ್ಯಕ್ಷರ ಅಧಿಕಾರವನ್ನು ಚಲಾಯಿಸಿ ಗ್ರಾ.ಪಂ.ಸಾಮಾನ್ಯ ಸಭೆಯನ್ನು ಕರೆಯುವ ಮತ್ತು ಮುಂದೂಡುವ ಕಾರ್ಯ ಮಾಡಿದ ಹಾಗೂ ಕಚೇರಿಯ ಲಿಖಿತ ಸೂಚನೆಗಳನ್ನು ಪಾಲಿಸದೆ ಪ್ರವಾಹದಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಕೂಡಾ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸದೆ ಇರುವುದು ದೃಢಪಟ್ಟ ವರದಿ ಆಧರಿಸಿ ಪಿಡಿಒ ಮಹಾಲಕ್ಷ್ಮಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಿ ಆದೇಶಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


