ತುಮಕೂರು: ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತದ ವಿಚಾರ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಶಾಲಾ ಶಿಕ್ಷಣ ಇಲಾಖೆ ಇಬ್ಬರು ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಜಿ.ಪಂ.ನಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, `ಜಿಲ್ಲೆಯ ಇಬ್ಬರು ಉಪನಿರ್ದೇಶಕರ ಕೆಲಸದ ಬಗ್ಗೆ ಸಮಾಧಾನವಿಲ್ಲ. ನಿಮ್ಮ ಕಾರ್ಯವೈಖರಿ ಪರಾಮರ್ಶೆಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಹೇಳಿದರು. ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗುರಿ ನಿಗದಿಪಡಿಸುವಂತೆ ಸೂಚಿಸಿದರು.
ಕಳೆದ ಸಭೆಯಲ್ಲಿ ಫಲಿತಾಂಶ ಹೆಚ್ಚಳ, ಚಿಕ್ಕನಾಯನಹಳ್ಳಿ ತಾಲ್ಲೂಕಿನ ಮಾದರಿ ಅಳವಡಿಕೆ ಬಗ್ಗೆ ನಿರ್ದೇಶಿಸಲಾಗಿತ್ತು. ಆದರೆ ಅನುಪಾಲನಾ ವರದಿಯಲ್ಲಿ ಈ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪಿಸಿಲ್ಲ. ಫಲಿತಾಂಶ ಹೆಚ್ಚಳಕ್ಕೆ ಯಾವ ಕ್ರಮಗಳನ್ನೂ ತೆಗೆದುಕೊಂಡಂತೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ಅವರ ಮೇಲೆ ಅಧಿಕಾರಿಗಳಿಗೆ ನಿಯಂತ್ರಣ ಇಲ್ಲವಾಗಿದೆ ಎಂದು ಕುಟುಕಿದರು. ಶಾಸಕ ಬಿ.ಸುರೇಶ್‌ಗೌಡ, ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವು ಶಾಸಕರು ಧ್ವನಿಗೂಡಿಸಿದರು. ಬಿಇಒ, ಮುಖ್ಯ ಶಿಕ್ಷಕರು ಸಭೆ ಮಾಡುತ್ತಾರೆ. ಪಾಠ ಮಾಡುವ ಕಡೆಗೆ ಗಮನ ಹರಿಸುತ್ತಿಲ್ಲ. ಇದಕ್ಕೆ ಇವರನ್ನೇ ಹೊಣೆ ಮಾಡಬೇಕು ಎಂದು ಸುರೇಶ್ ಗೌಡ ಆಗ್ರಹಿಸಿದರು. ಫಲಿತಾಂಶ ಹೆಚ್ಚಳಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿ.ಪಂ ಸಿಇಒ ಜಿ.ಪ್ರಭು ಮಾಹಿತಿ ನೀಡಿದರು.
ನೋಟಿಸ್ ಜಾರಿ:
ಉದ್ಯೋಗ ಖಾತ್ರಿ ಯೋಜನೆಯನ್ನು ತೋಟಗಾರಿಕೆ ಇಲಾಖೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದಿರುವುದಕ್ಕೆ ಸಚಿವರು ಕ್ರಮದ ಎಚ್ಚರಿಕೆ ನೀಡಿದರು. ಈ ಯೋಜನೆಯಲ್ಲಿ ಗುರಿ ಸಾಧಿಸದ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ತುಮಕೂರು, ತುರುವೇಕೆರೆ ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿರುವ ಫಾರಂಗಳ ರಕ್ಷಣೆ, ಸದುಪಯೋಗ ಮಾಡದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಯಿಂದ ವಿತರಿಸಿರುವ ಉಪಕರಣಗಳ ಬಳಕೆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಸಿರಿ ಧಾನ್ಯ ಬೆಳೆಯುವ ಪ್ರದೇಶ ಕಡಿಮೆಯಾಗಿರುವುದು, ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಸರಿಯಾಗಿ ಪರಿಹಾರ ವಿತರಣೆ ಮಾಡದಿರುವುದಕ್ಕೂ ಸಿಟ್ಟಾದರು.
ಜಿಲ್ಲೆಗೆ ಮಂಜೂರಾಗಿರುವ 33 ಉಪ ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕುಸುಮ್ ಯೋಜನೆಯಲ್ಲಿ ಭೂ ಮಂಜೂರಾತಿಗೆ ಕ್ರಮ ವಹಿಸುವಂತೆ ನಿರ್ದೇಶಿಸಿದರು.
ನಂದಿಹಳ್ಳಿ ಬೈಪಾಸ್ ನಿಲ್ಲದು:
ನಂದಿಹಳ್ಳಿ– ಮಲ್ಲಸಂದ್ರ ವಸಂತನರಸಾಪುರ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು ಅಭಿವೃದ್ಧಿ ದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಬಗ್ಗೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಜಿ.ಪರಮೇಶ್ವರ ಹೇಳಿದರು.
ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ರೈತರ ಮನವೊಲಿಸಬೇಕು. ಸರಿಯಾಗಿ ಮಾರ್ಗದರ್ಶನ ಮಾಡಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು. ಬೈಪಾಸ್ ರಸ್ತೆ ನಿರ್ಮಿಸುವುದು ಅನಿವಾರ್ಯವಾಗಿದ್ದು ಈ ಯೋಜನೆ ನಿಲ್ಲುವುದಿಲ್ಲ. ಸುಮಾರು 110 ಎಕರೆ ಜಮೀನು ಬೇಕಿದ್ದು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಪಷ್ಟಪಡಿಸಿದರು.
ಸಿಸೇರಿಯನ್ ಹೆರಿಗೆ; ವೈದ್ಯರ ದಂಧೆ:
ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಪ್ರಮಾಣ ಕಡಿಮೆ ಆಗದಿರುವ ಬಗ್ಗೆ ಸಚಿವ ಪರಮೇಶ್ವರ ಶಾಸಕರು ಒಟ್ಟಾಗಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಕೆಡಿಪಿ ಸಭೆಯಲ್ಲೂ ಇದೇ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಆಗಲೂ ಕ್ರಮಕ್ಕೆ ಸೂಚಿಸಲಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 60 ಖಾಸಗಿ ಆಸ್ಪತ್ರೆಗಳಲ್ಲಿ ಶೇ 84ರಷ್ಟು ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ. ಈ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಡಿಎಚ್‌ಒ ಡಾ.ಚಂದ್ರಶೇಖರ್ ಹೇಳುತ್ತಿದ್ದಂತೆ ಶಾಸಕರು ಮುಗಿಬಿದ್ದರು.
`ಸಿಸೇರಿಯನ್ ಹೆರಿಗೆ ಮಾಡಿಸುವುದನ್ನು ವೈದ್ಯರು ದಂಧೆ ಮಾಡಿಕೊಂಡಿದ್ದಾರೆ. ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿ ಆಗುವುದಿಲ್ಲ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಸಂಜೆ ವೈದ್ಯರು ಅದೇ ಆಸ್ಪತ್ರೆಗೆ ಹೋಗಿ ಸಿಸೇರಿಯನ್ ಹೆರಿಗೆ ಮಾಡಿಸಿ ಹಣ ವಸೂಲಿ ಮಾಡುತ್ತಾರೆ. ಹಣ ಮಾಡಲು ಸರ್ಕಾರಿ ವೈದ್ಯರಾಗಬೇಕಿತ್ತೇ?’ ಎಂದು ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಚ್.ವಿ.ವೆಂಕಟೇಶ್, ಸುರೇಶ್‌ಗೌಡ, ಜ್ಯೋತಿಗಣೇಶ್ ತರಾಟೆಗೆ ತೆಗೆದುಕೊಂಡರು.
ಪಾವಗಡ ತಾಲ್ಲೂಕು ವೆಂಕಟಾಪುರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಮಯದಲ್ಲಿ ಔಷಧಿ ದಾಸ್ತಾನು ಇದ್ದರೂ ವಿತರಿಸದಿರುವುದು ಕಂಡುಬಂತು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ ನೀಡಿದರು. ಇಷ್ಟು ದಿನಗಳಾದರೂ ಸಂಬಂಧಿಸಿದ ವೈದ್ಯರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸುರೇಶ್‌ಗೌಡ ಪ್ರಶ್ನಿಸಿದರು.
ನಕಲಿ ಪತ್ರ:
ಶಿರಾ ಆಸ್ಪತ್ರೆಯಲ್ಲಿ ಅಂಗವಿಕಲರು ಅಲ್ಲದವರಿಗೆ ಅಂಗವಿಕಲರ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಿದಾನಂದಗೌಡ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಟಿ.ಬಿ.ಜಯಚಂದ್ರ ‘ಈ ದಂಧೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


