ಸರಗೂರು: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಬಲಿಪಡೆದಿರುವ ಹುಲಿಯ ಸೆರೆಗೆ ಶನಿವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ಕಾಡಿನೊಳಗೆ ಸುಮಾರು 7 ಕಿ.ಮೀ. ದೂರದಲ್ಲಿ ಡ್ರೋನ್ ಕ್ಯಾಮೆರಾಗೆ ಹುಲಿಯೊಂದು ಸೆರೆಯಾಗಿದೆ.
ತಾಲೂಕಿನ ಹಳೇಹೆಗ್ಗುಡಲು ಬಳಿಯ ಜಮೀನಿಲ್ಲಿ ಮೂರನೇ ಬಲಿ ಪಡೆದ ಹುಲಿಗಾಗಿ ಅರಣ್ಯ ಇಲಾಖೆ ಹಗಲು ರಾತ್ರಿ ಎನ್ನದೆ ತೀವ್ರ ಶೋಧ ಆರಂಭಿಸಿದ್ದು, ಸಾಕಾನೆಗಳಾದ ಭೀಮಾ, ಮಹೇಂದ್ರ, ಲಕ್ಷ್ಮಣ, ಶ್ರೀಕಂಠ ಮೂಲಕ ಶನಿವಾರ ಮುಂಜಾನೆಯಿಂದಲೂ ಶೋಧ ಆರಂಭಿಸಿದೆ.
ಆದರೂ ಹುಲಿಯ ಗುರುತು ಪತ್ತೆಯಾಗಲಿಲ್ಲ. ಬಳಿಕ ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆಸುವ ವೇಳೆ ಕಾಡಿನ ಒಳಭಾಗದಲ್ಲಿ ಸುಮಾರು 7 ಕಿ.ಮೀ. ಅಂತರದಲ್ಲಿ ಹುಲಿಯೊಂದರ ಚಿತ್ರ ಸೆರೆಯಾಗಿದೆ ಎನ್ನಲಾಗಿದೆ.
ಸದ್ಯ ಕಾರ್ಯಾಚರಣೆಗೆ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮೈಸೂರು ಪ್ರಾದೇಶಿಕ ವಲಯದಿಂದಲೂ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, 100ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಹುಲಿಗಾಗಿ ಶೋಧ ಮುಂದುವರಿಸಿದ್ದಾರೆ.
ಇನ್ನೊಂದು ಕಡೆ ಕಾರ್ಯಾಚರಣೆ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯಲ್ಲಿ ಮೂರು ಅರಣ್ಯ ವಲಯಗಳಲ್ಲಿ ಶನಿವಾರ ದಂದು ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆಗೆ ‘ವಾಕ್ ಥ್ರೂ ಕೇಜ್’ ಎಂಬ ವಿಶೇಷ ಬೋನ್. ಈ ಬೋನ್ ಗೆ ಹುಲಿ ಕಾಲಿಟ್ಟ ಕೂಡಲೇ ಎರಡು ಕಡೆಯಿಂದ ಬಾಗಿಲು ಬಿದ್ದು ಹುಲಿಯನ್ನು ಸೆರೆ ಹಿಡಿಯುವ ತಂತ್ರಜ್ಞಾನವನ್ನು ಹೊಂದಿರುವ ಬೋನ್ ಇರಿಸಲಾಗಿದೆ. ಇದಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಕಾಡಾನೆಗಳಾದ ಭೀಮ, ಮಹೇಂದ್ರ, ಲಕ್ಷ್ಮಣ, ಶ್ರೀಕಂಠ ಆನೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಡಾ.ರಮೇಶ್, ಡಾ.ವಾಸೀಂ ಮಿರ್ಜ್, ನುಗು ಆರ್ ಎಫ್ ಒ ವಿವೇಕ್, ಮೋಳೆಯೂರು ವಲಯ ಅಮೃತ ಮಾಯಪ್ಪ, ಸೇರಿದಂತೆ 130 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಇದಲ್ಲದೆ ನಂಜನಗೂಡು ತಾಲೂಕಿನ ಹೊಸವೀಡು ಕಾಲನಿಯಲ್ಲಿಯೂ ಎರಡು ಹುಲಿ ಕಾಣಿಸಿಕೊಂಡ ಬೆನ್ನಲ್ಲೆ ಬುಧವಾರ ಒಂದು ಹೆಣ್ಣು ಹುಲಿ ಸೆರೆ ಹಿಡಿದ ಇಲಾಖೆ ಮತ್ತೊಂದು ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು.
ಓಂಕಾರ ವಲಯ ಅರಣ್ಯದಂಚಿನ ನಾಗನಾಣಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ವಿಷಯ ತಿಳಿದ ಕೂಡಲೇ ಎಸಿಎಫ್ ಡಿ.ಪರಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಂಬಿಂಗ್ ನಡೆಸಿದರು.
ಮೊಳೆಯೂರಲ್ಲಿ ಕೂಂಬಿಂಗ್: ಕೂಡಗಿ ಗ್ರಾಮದ ರೈತನನ್ನು ಬಲಿ ಪಡೆದ ಹುಲಿ ಸೆರೆಗೆ ಮೊಳೆಯೂರು ವಲಯದ ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಇದಲ್ಲದೆ ಬಾಳಗಂಚಿ ಅರಣ್ಯ ಪ್ರದೇಶದ ತೆಲಗುಮಸಹಳ್ಳಿ, ಕಾಟವಾಳು, ದೇವಲಾಪುರ, ದೇವಲಾಪುರ ಶೆಡ್ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದ ಎಂಬ ವಿಷಯ ತಿಳಿದು ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆರ್ ಎಫ್ ಒ ಅಮೃತ ಎ ಮಾಯಪ್ಪ, 100 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಜರಿದ್ದರು.
ಮಧ್ಯಾಹ್ನದ ವೇಳೆ ಓಂಕಾರ್ ವಲಯದ ಬೇಗೂರು ಯಡವನಳ್ಳಿ ಬಳಿ ಅರಣ್ಯ ವೀಕ್ಷಕನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಸ್ಥಳಕ್ಕೆ ಸಾಕಾನೆಗಳನ್ನು ರವಾನಿಸಿ ಅಲ್ಲಿಯೂ ಕೂಂಬಿಂಗ್ ಆರಂಭಿಸಲಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


