ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಗಳಲ್ಲೂ ಬೆಳೆದಿರುವ ಗಿಡಗಂಟಿಗಳು, ಪೊದೆಗಳನ್ನು ತೆರವು ಮಾಡಬೇಕೆಂದು ಆಗ್ರಹಿಸಿ ಸೋಮವಾರದಂದು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಟಿ.ಆರ್., ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾಮಗಾರಿಗೆ ಹಣ ಮಂಜೂರಾಗಿ ಹಲವು ತಿಂಗಳುಗಳು ಕಳೆದಿದ್ದರು, ಇದುವರೆಗೂ ರಸ್ತೆ ಕಾಮಗಾರಿ ಕೆಲಸ ಪ್ರಾರಂಭವಾಗಿಲ್ಲ. 2024ರ ಡಿಸೆಂಬರ್ 13ರಂದು ಬಂದು ಜನವರಿಯಿಂದ ಕೆಲಸ ಪ್ರಾರಂಭ ಮಾಡಿ ಏಪ್ರಿಲ್ ಒಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿ ಹೋದವರು ಇದುವರೆಗೂ ಸಹ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದರು.
ಕಳೆದ 20 ದಿನಗಳಲ್ಲಿ ಈಗಾಗಲೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರ ಜೊತೆಗೆ ಗಿಡ ಗಂಟಿಗಳು, ಪೊದೆಗಳು, ಎತ್ತರವಾಗಿ ಬೆಳೆದ ಕಾರಣ ಹುಲಿ ಸೇರಿದಂತೆ ಕಾಡು ಪ್ರಾಣಿಗಳು ಓಡಾಟ ಹೆಚ್ಚಾಗಿದೆ. ಆನೆ ಬಂದು ನಿಂತರು ಸಹ ಗೊತ್ತಾಗುವುದಿಲ್ಲ .ಇದರಿಂದಾಗಿ ಬೆಳಿಗ್ಗೆ ಹಾಗೂ ಸಂಜೆ ನಿರ್ಭಯವಾಗಿ ಸಂಚಾರ ಮಾಡುವುದೇ ಕಷ್ಟವಾಗಿದೆ. ಮಳೆಗಾಲದಲ್ಲಿ ಈ ಹಾಡಿಯಿಂದ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ಶಾಲೆಗೂ ಸಹ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೂ ಅನಾರೋಗ್ಯ ಪೀಡಿತ ಬಾಣಂತಿಯರು, ಗರ್ಭಿಣಿಯರು, ವೃದ್ದರು ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ಅಪಾಯಕಾರಿಯಾಗಿರುತ್ತದೆ. ನಾಗರಿಕ ಸಮಾಜದಲ್ಲಿ ಬದುಕುವ ಯಾವುದೇ ಸೌಲಭ್ಯಗಳು ಸರಿಯಾಗಿ ಇಲ್ಲದೇ ಈ ಹಾಡಿಯಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಜನರು ಬದುಕುತ್ತಿದ್ದಾರೆ. ನಮ್ಮ ಜನಪ್ರತಿನಿಧಿಗಳು ತಮ್ಮ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಳ್ಳುವಾಗ ಯಾವ ವಿಳಂಬವಾಗದಿರುವಾಗ ಜನ ಸಾಮಾನ್ಯರ ಕೆಲಸ ಮಾಡುವಾಗ ವಿನಾಕಾರಣ ವಿಳಂಬ ಮಾಡುವುದು ಖಂಡನೀಯ. ಹಾಗಾಗಿ ಈ ಕೂಡಲೇ ರಸ್ತೆ ಬದಿ ಇರುವ ಗಿಡಗಂಟಿಗಳನ್ನು ತೆಗೆದು ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಈ ಮೂಲಕ ದಡದಹಳ್ಳಿ ಹಾಡಿ ಜನರು ಅಖಿಲ ಭಾರತ ಜನಧಿಕಾರ ಸುರಕ್ಷಾ ಸಮಿತಿಯ ಪರವಾಗಿ ಆಗ್ರಹಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಮುಖಂಡರಾದ ಸುನಿಲ್ ಟಿ ಆರ್ ದಡದಹಳ್ಳಿ ಹಾಡಿ ಮುಖಂಡರಾದ ನಂಜುಂಡ, ಕಾವ್ಯ, ರಾಜು ಸೋಮಣ್ಣ, ಚಿಕ್ಕಮ್ಮ, ಕಾಳ, ಕರಿಯ, ಬೊಮ್ಮ, ಕುಳ್ಳಮ್ಮ, ಭಾಗ್ಯ ಸೇರಿದಂತೆ ಹಾಡಿಯ ಜನರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


