ತುಮಕೂರು: ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಬುಧವಾರ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್, ಸಿಬ್ಬಂದಿ ಕೌತಮಾರನಹಳ್ಳಿ ಗ್ರಾಮದ ಬಳಿ ಸಮೀಕ್ಷೆಗೆ ಹೋಗಿದ್ದರು. ಈ ವೇಳೆ ರೈತ ಮುಖಂಡರು, ಗ್ರಾಮಸ್ಥರು ಸಮೀಕ್ಷೆ ಕಾರ್ಯಕ್ಕೆ ಅಡ್ಡಿ ಪಡಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಸಮೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಜಮೀನು ಸರ್ವೆ ಮಾಡುವ ಮುನ್ನ ಗ್ರಾಮ ಸಭೆ ನಡೆಸಬೇಕು. ಏಕಾಏಕಿ ಸಮೀಕ್ಷೆ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ರೈತರ ಜತೆಗೆ ಸಭೆ ನಡೆಸಬೇಕು ಎಂದು ರೈತರು ಒತ್ತಾಯಿಸಿದರು. ರೈತರ ಸಮಸ್ಯೆ ಕೇಳದ ಜಿಲ್ಲಾಧಿಕಾರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಸರ್ಕಾರದ ಬಳಿಗೂ ಒಂದು ನಿಯೋಗ ಹೋಗುತ್ತೇವೆ. ಬಹಳಷ್ಟು ರೈತರು ಈ ಯೋಜನೆ ವಿರೋಧಿಸಿದ್ದಾರೆ. ರೈತರ ಜತೆಗೆ ಸಭೆ ನಡೆಸುವಂತೆ ಒತ್ತಾಯಿಸುತ್ತೇವೆ. ಸಭೆ ನಡೆಸಿದರೆ ರೈತರಿಗೆ ಅಗತ್ಯ ಪರಿಹಾರವಾದರೂ ಸಿಗುತ್ತದೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಸಿದ್ಧವಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ಉಮೇಶ್, ಕಂಬೇಗೌಡ, ರಮೇಶ್, ಸಿ.ಯತಿರಾಜ್, ಉದಯ್ ಕುಮಾರ್, ಪಾಲನೇತ್ರಯ್ಯ ಇತರರು ಭಾಗವಹಿಸಿದ್ದರು.
ರೈತರಿಗೆ ಬೆದರಿಕೆ:
ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತ ಮುಖಂಡರು ರೈತರಿಗೆ ಬೆದರಿಕೆ ಹಾಕಿ ಸಹಿ ಪಡೆದುಕೊಂಡು ಹೋಗಿದ್ದಾರೆ ಎಂದು ರೈತರು ಆರೋಪಿಸಿದರು. ಜಿಲ್ಲಾಧಿಕಾರಿ ರೈತರ ಜತೆಗೆ ಕುಳಿತು ಮಾತನಾಡಿದರೆ ಇದಕ್ಕೊಂದು ಪರಿಹಾರ ಸಿಗುತ್ತದೆ. ಆದರೆ ಅವರು ಸಭೆ ನಡೆಸಲು ಸಿದ್ಧರಿಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


