ತುಮಕೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆಂಗು ಬೆಳೆಯಲ್ಲಿ ಕೆಂಪು ಮೂತಿ ಹುಳು ಮತ್ತು ಅಣಬೆ ರೋಗ ಬಾಧೆಯು ಹೆಚ್ಚಾಗುತ್ತಿರುವುದರಿಂದ ಸಮಗ್ರವಾಗಿ ಹತೋಟಿ ಮಾಡುವ ಕ್ರಮಗಳ ಕುರಿತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಲಹೆ ನೀಡಲಾಗಿದೆ.
ಕೆಂಪು ಮೂತಿ ಹುಳು:
ಕೀಟ ಬಾಧೆಯ ಲಕ್ಷಣ ಹಾಗೂ ನಿರ್ವಹಣೆ ಈ ಕೀಟವನ್ನು ವೈಜ್ಞಾನಿಕವಾಗಿ ರಿಂಕೋಫೋರಸ್ ಫೆರುಜೀನಿಯಸ್ ಎಂದು ಗುರುತಿಸಲಾಗಿದ್ದು, ಈ ಕೀಟವು ತನ್ನ ಜೀವನ ಚಿತ್ರವನ್ನು ಪೂರ್ಣಗೊಳಿಸಲು ತೆಂಗಿನ ಮರವನ್ನು ಅವಲಂಬಿಸುವುದರಿಂದ ಎಲ್ಲಾ ಹಂತದಲ್ಲೂ ತೆಂಗಿಗೆ ಹಾನಿ ಉಂಟು ಮಾಡುತ್ತದೆ.
ಈ ಕೆಂಪು ಮೂತಿ ಹುಳುಗಳು ತೆಂಗಿನ ಮರದ ಕಾಂಡದೊಳಗೆ ಸೇರಿಕೊಂಡು ಮೃಧು ಭಾಗಗಳನ್ನು ಕೊರೆಯುವುದರಿಂದ ಪ್ರಾರಂಭದಲ್ಲಿ ಸಣ್ಣ–ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಕೀಟ ಬಾಧೆಗೆ ಒಳಗಾದ ರಂಧ್ರಗಳಿಂದ ಕಂದು ಬಣ್ಣದ ರಸ ಸೋರಿರುವುದು ಹಾಗೂ ಹುಳುಗಳು ತಿಂದು ಹಾಕಿದ ನಾರು ಹೊರಬಂದಿರುವುದನ್ನು ಕಾಣಬಹುದು. ಕೀಟ ಬಾಧೆಯು ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟು ಎಡಮಟ್ಟೆಗಳು ಸೀಳುತ್ತವೆ. ಕೆಂಪು ಮೂತಿ ಹುಳುವಿನ ಬಾಧೆಯನ್ನು ಖಚಿತಪಡಿಸಿಕೊಳ್ಳಲು ನಿಶ್ಯಬ್ದ ಸಮಯದಲ್ಲಿ ತೆಂಗಿನ ಮರದ ಕಾಂಡಕ್ಕೆ ಕಿವಿಯನ್ನಿಟ್ಟು ಆಲಿಸಿದಾಗ ಹುಳುಗಳು ತಿನ್ನುತ್ತಿರುವ ಶಬ್ದವನ್ನು ಕೇಳಿಸಿಕೊಳ್ಳಬಹುದು. ಕೆಂಪು ಮೂತಿ ಹುಳುಗಳು ಎಳೆಯ ವಯಸ್ಸಿನ ತೆಂಗಿನ ಮರಗಳಿಗೆ ಹೆಚ್ಚು ಹಾನಿಕಾರಕ ಕೀಟವಾಗಿದ್ದು, ಸಾಮಾನ್ಯವಾಗಿ 5 ರಿಂದ 20 ವರ್ಷ ವಯಸ್ಸಿನ ಮರಗಳು ಇದರ ಹಾವಳಿಗೆ ತುತ್ತಾಗುತ್ತವೆ.
ಕೆಂಪು ಮೂತಿ ಹುಳುಗಳ ನಿರ್ವಹಣೆ:
ತೆಂಗಿನ ಮರದ ಯಾವುದೇ ಗರಿಗಳನ್ನು ಕತ್ತರಿಸುವಾಗ ಕಾಂಡದಿಂದ 1 ಮೀ. ಉದ್ದ ಬಿಟ್ಟು ಉಳಿದ ಭಾಗ ಕತ್ತರಿಸಿ, ಮೃದುವಾದ ಅಂಗಾಂಶಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು. ತೋಟದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಕೀಟ ಬಾಧೆಯು ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದನ್ನು ನಿವಾರಿಸಲು ಬಾಧೆಗೊಳಗಾದ ಮರಗಳನ್ನು ಕತ್ತರಿಸಿ, ಅವುಗಳನ್ನು ಸುಟ್ಟು ಹಾಕಬೇಕು. ಕೆಂಪು ಮೂತಿ ಹುಳುಗಳನ್ನು ಆಕರ್ಷಿಸಲು ಎಕರೆಗೆ 1ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು ಹಾಗೂ ಈ ಮೋಹಕ ಬಲೆಗಳನ್ನು ಯಾವುದೇ ಕಾರಣ- ಕ್ಕೂ ತೆಂಗಿನ ಮರಕ್ಕೆ ಕಟ್ಟಬಾರದು ಮತ್ತು ದೂರದ ಮೈದಾನದಲ್ಲಿ (ಭೂಮಿಯಿಂದ 1.2/2 ಮೀ. ಎತ್ತರದವರೆಗೆ)ಕಟ್ಟುವುದರಿಂದ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿಡಬಹುದು.
ಸೈನೋಸ್ಯಾಡ್-2.5 ಎಸ್.ಸಿ.ಯನ್ನು ಪ್ರತಿ ಲೀಟರ್ ನೀರಿಗೆ 5 ಮಿ.ಲೀ.ನಂತೆ, ಇಮಿಡಾ ಕ್ಲೋರೊಫಿಡ್ 30.5 ಎಸ್.ಎಲ್.ಅನ್ನು ಪ್ರತಿ ಲೀಟರ್ ನೀರಿಗೆ 1 ಮಿ.ಲೀ.ನಂತೆ ಬಾಧಿತ ಮರದ ಕಾಂಡದ ಎತ್ತರದಲ್ಲಿರುವ ಮೊದಲ ರಂಧ್ರದಿಂದ ಸುರಿದು ಕಾಂಡದಲ್ಲಿ ಸೇರಿಸುವುದರಿಂದ ಕೀಟವನ್ನು ಹತೋಟಿಯಲ್ಲಿಡಬಹುದು. ತೆಂಗಿನ ತೋಟದಲ್ಲಿ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಈ ಕೀಟದ ಹಾವಳಿಯನ್ನು ಕಡಿಮೆ ಮಾಡಬಹುದು.
ಅಣಬೆ ರೋಗದ ಲಕ್ಷಣಗಳು ಹಾಗೂ ನಿರ್ವಹಣೆ:
ಅಣಬೆ ರೋಗವು ಗ್ಯಾನೋಡರ್ಮ ಲುಸಿಡಮ್ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ರೋಗವು ಹೆಚ್ಚಾಗಿ ನಿರ್ಲಕ್ಷಿತ ತೋಟಗಳಲ್ಲಿ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯ ಕೊರತೆಯಿರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮರದಿಂದ ಮರಕ್ಕೆ, ಮಣ್ಣು ಮತ್ತು ಹರಿಯುವ ನೀರಿನ ಮುಖಾಂತರ ಅಣಬೆ ರೋಗ ಹರಡುತ್ತದೆ. ಈ ಶಿಲೀಂಧ್ರದಿಂದ ಬೇರು ಕೊಳೆತು, ಕಾಂಡದ ಬುಡದಿಂದ 1 ಮೀ. ಎತ್ತರದವರೆಗೆ ಕೆಂಪು ಮಿಶ್ರಿತ ಕಂದು ಬಣ್ಣದ ರಸ ಹೊಡೆದು, ಹೊರಭಾಗದ ತೊಗಟೆ ಸತ್ತು ಹೋಗುತ್ತದೆ.
ಮರದ ಕೆಳಭಾಗದ ಗರಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಂದೊಂದಾಗಿ ಒಣಗಿ ಜೋತು ಬೀಳುತ್ತವೆ. ರೋಗದ ತೀವ್ರತೆಯಿಂದ ಬಳಲುತ್ತಿರುವ ಮರದ ಕಾಯಿಗಳ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಸೋಂಕು ಮುಂದುವರೆದಂತೆ ಗರಿಗಳ ಗಾತ್ರ ಕಿರಿದಾಗಿ ಮರದ ಬುಡದಲ್ಲಿ ಚಿಕ್ಕ–ಚಿಕ್ಕ ಅಣಬೆಗಳು ಬೆಳೆದು ಮರ ಸತ್ತು ಹೋಗುತ್ತದೆ.
ಅಣಬೆ ರೋಗದ ನಿರ್ವಹಣೆ:
ಸೂಕ್ತ ಬಸಿಗಾಲುವೆ ನಿರ್ಮಾಣ ಮಾಡುವುದರ ಮೂಲಕ ತೋಟಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಹರಿಯುವ ನೀರು ಹಾಯಿಸುವುದರ ಬದಲಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ರೋಗದ ಹರಡುವಿಕೆಯನ್ನು ಕಡಿಮೆ ಮಾಡಬಹುದು. ಈ ರೋಗವು ಮರದಿಂದ ಮರಕ್ಕೆ ಹರಡುವುದನ್ನು ತಪ್ಪಿಸಲು ಮರದ ಸುತ್ತ 1 ಅಡಿ ಅಗಲ ಮತ್ತು 1.5 ಅಡಿ ಆಳದ ಕಂದಕವನ್ನು ತೆಗೆದು ಪ್ರತಿ ಲೀ. ನೀರಿಗೆ 3 ಗ್ರಾಂ, ಕಾಪರ್ ಆಕ್ಸಿಕ್ಲೋರೈಡ್ ಬೆರೆಸಿದ 10 ಲೀ. ದ್ರಾವಣವನ್ನು ಅಥವಾ ಶೇ. 1ರಷ್ಟು ಬೋರ್ಡೋ ದ್ರಾವಣವನ್ನು (ತಯಾರು ಮಾಡಿಕೊಂಡು) ಕಂದಕದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ಸಮಗ್ರ ಪೋಷಕಾಂಶ ನಿರ್ವಹಣೆಯ ಜೊತೆಗೆ ತೆಂಗಿನ ಮರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿ ಮರಕ್ಕೆ 5 ಕೆ.ಜಿ. ಬೇವಿನ ಹಿಂಡಿಯನ್ನು ನೀಡಬೇಕು. ಜೈವಿಕ ಶಿಲೀಂದ್ರ ನಾಶಕವಾದ ಟ್ರೈಕೋಡರ್ಮಾವನ್ನು 50 ಕೆ.ಜಿ. ಕೊಟ್ಟಿಗೆ ಗೊಬ್ಬರಕ್ಕೆ 120 ಗ್ರಾಂನಷ್ಟು ಮಿಶ್ರಣ ಮಾಡಿ ಮರದ ಸುತ್ತಲೂ ಅಗೆದು ಮಣ್ಣಿಗೆ ಹಾಕಬೇಕು. ರೋಗ ಬಾಧಿತೆ ಪ್ರತಿ ಮರಕ್ಕೆ 2 ಮಿ.ಲೀ. ಹೆಕ್ಸಾಕೋನಜೋಲ್ ಶಿಲೀಂದ್ರ ನಾಶಕವನ್ನು 100 ಮಿ.ಲೀ. ನೀರಿನಲ್ಲಿ ಬೆರೆಸಿ ಬೇರಿನ ಮುಖಾಂತರ ಮೂರು ತಿಂಗಳಿಗೊಮ್ಮೆ ವರ್ಷಕ್ಕೆ 4 ಬಾರಿ ನೀಡುವುದರಿಂದ ಈ ರೋಗವನ್ನು ಹತೋಟಿಗೆ ತರಬಹುದು. (ಶೇ.0.2 ಹೆಕ್ಸಾಕೊನಜೋಲ್ ಶಿಲೀಂದ್ರ ನಾಶಕವನ್ನು ಬುಡಕ್ಕೆ 30–40 ಲೀ. ದ್ರಾವಣವನ್ನು ನೆನಸಬೇಕು).
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


