ತುಮಕೂರು: ರೈತ ಹೋರಾಟಗಾರ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿ.ಅಜ್ಜಪ್ಪ (75) ಗುರುವಾರ ನಿಧನ ಹೊಂದಿದರು.
ನಗರದಲ್ಲಿ ನೆಲೆಸಿದ್ದು, ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಸಮೀಪದ ಶಿವಪುರ ಬಳಿ ತಮ್ಮ ಜಮೀನಿಗೆ ಹೋಗಿದ್ದ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ.
ಮೃತರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ನಗರದ ಜನ ಚಳವಳಿ ಕೇಂದ್ರದಲ್ಲಿ ಸಂಜೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತ ದೇಹವನ್ನು ಅವರ ಹುಟ್ಟೂರಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಗೆ ತೆಗೆದುಕೊಂಡು ಹೋಗಲಾಯಿತು. ಶುಕ್ರವಾರ ಬೆಳಿಗ್ಗೆ ಸೂರನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಆರಂಭದಲ್ಲಿ ಎಸ್ ಎಫ್ ಐ ಮೂಲಕ ಹೋರಾಟ, ವಿದ್ಯಾರ್ಥಿ ಚಳವಳಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ನಿವೃತ್ತಿಯ ನಂತರ ರೈತ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿಜ್ಞಾನ ಕೇಂದ್ರದ ಭಾರತ ಜ್ಞಾನ ವಿಜ್ಞಾನ ಸಮಿತಿ ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ಚಳವಳಿ ಸಂಘಟಿಸಿದ್ದರು. ಬಗರ್ ಹುಕ್ಕುಂ ಸಾಗುವಳಿ ರೈತರನ್ನು ಸಂಘಟಿಸಿ ಹೋರಾಟ ರೂಪಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


