ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರು(Namma Tumakuru): ತಂದೆ—ತಾಯಿ ಆಸ್ತಿ ದಾನ ಮಾಡಿದ ನಂತರ, ಅವರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ಕಾನೂನಿನ ಮೂಲಕ ತಂದೆ ತಾಯಿ ತಕ್ಕ ಪಾಠ ಕಲಿಸಿದ್ದು, ತಾವು ದಾನವಾಗಿ ನೀಡಿದ ಆಸ್ತಿಯನ್ನು ವಾಪಾಸ್ ಪಡೆದುಕೊಳ್ಳುವ ಮೂಲಕ, ಮಕ್ಕಳಿಗೆ ಬುದ್ಧಿ ಕಳಿಸಿದ್ದಾರೆ.
ವಯೋವೃದ್ಧೆಯಿಂದ ದೂರು:
ಶಿರಾ ತಾಲ್ಲೂಕಿನ ಸಪ್ತಗಿರಿ ಬಡಾವಣೆಯ ರಂಗಮ್ಮ ಅವರು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ(Senior Citizens Helpline)ವನ್ನು ಸಂಪರ್ಕಿಸಿದ್ದರು. ಈ ಮೂಲಕ ದೂರು ನೀಡಿದ ಅವರು, ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಠ ಗ್ರಾಮದ ಸ.ನಂ. 37ರ 3-26 ಎ/ಗುಂಟೆ ಜಮೀನನ್ನು ದಿನಾಂಕ 23-12-2021 ರಂದು ತಮ್ಮ ಮೂವರು ಪುತ್ರರಾದ ಗುಜ್ಜಾರಪ್ಪ, ಶಿವಣ್ಣ ಮತ್ತು ಹನುಮಂತಯ್ಯ ಅವರಿಗೆ ದಾನಪತ್ರದ ಮೂಲಕ ನೀಡಿದ್ದಾಗಿ ತಿಳಿಸಿದ್ದಾರೆ.
ಆದರೆ ದಾನಪತ್ರ ಪಡೆದ ನಂತರ ಮಕ್ಕಳು ತಾಯಿಯ ಹಾಗೂ ತಂದೆಯ ಆರೈಕೆ, ಆಹಾರ, ಚಿಕಿತ್ಸಾ ನೆರವು, ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ದಾನಪತ್ರವನ್ನು ರದ್ದುಪಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಮಕ್ಕಳ ವಾದ ಏನು?
ತಂದೆ ತಾಯಿಯ ದೂರಿನ ಹಿನ್ನೆಲೆ ತುಮಕೂರು ಉಪವಿಭಾಗಾಧಿಕಾರಿಗಳ ಮತ್ತು ನಿರ್ವಹಣಾ ನ್ಯಾಯ ಮಂಡಳಿಯ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ ಮೂವರು ಪುತ್ರರು ಜಂಟಿಯಾಗಿ ಲಿಖಿತ ಹೇಳಿಕೆ ಸಲ್ಲಿಸಿದ್ದು, ತಾಯಿ–ತಂದೆಗೆ ಆರೈಕೆ ಮಾಡುತ್ತಿದ್ದೇವೆ, ದಾನಪತ್ರ ತಾಯಿಯ ಸ್ವಇಚ್ಛೆಯಿಂದ ಮಾಡಲಾಗಿದೆ, ಭೂಮಿಯಲ್ಲಿ ಅಭಿವೃದ್ಧಿ ಮಾಡಿರುವುದರಿಂದ ಹಿಂದಿರುಗಿಸಲು ಸಮ್ಮತಿ ಇಲ್ಲ, ತಾಯಿ–ತಂದೆ ತಮ್ಮ ಜತೆ ವಾಸಿಸಲು ಬಂದರೆ ನೋಡಿಕೊಳ್ಳಲು ಸಿದ್ಧ ಎಂದು ಹೇಳಿದರು.
ದಾಖಲೆ ಸಲ್ಲಿಸದ ಮಕ್ಕಳು:
ನಾವು ತಂದೆ ತಾಯಿಯ ಆರೈಕೆ ಮಾಡುತ್ತಿದ್ದೇವೆ ಎಂದು ಹೇಳಿರುವ ಪುತ್ರರು ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ತಮ್ಮ ವಾದಕ್ಕೆ ಯಾವುದೇ ಬೆಂಬಲವಾದ ಸಾಕ್ಷಿಗಳು ಅವರಿಂದ ದೊರೆಯಲಿಲ್ಲ.
ದಾನಪತ್ರ ರದ್ದು:
ವಯೋವೃದ್ಧೆಯ ದೂರನ್ನು ವಿಚಾರಣೆ ನಡೆಸಿದ ತುಮಕೂರು ಉಪವಿಭಾಗಾಧಿಕಾರಿಗಳ ಮತ್ತು ನಿರ್ವಹಣಾ ನ್ಯಾಯ ಮಂಡಳಿಯ ನ್ಯಾಯಾಲಯವು ಹಿರಿಯ ನಾಗರಿಕರಾದ ರಂಗಮ್ಮ ಅವರು ತಮ್ಮ ಮೂವರು ಪುತ್ರರಿಗೆ ನೀಡಿದ್ದ ದಾನಪತ್ರವನ್ನು ರದ್ದುಪಡಿಸುವ ಮಹತ್ವದ ಆದೇಶವನ್ನು ಹೊರಡಿಸಿದೆ. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ–2007ರ ಕಲಂ 23(1) ರಡಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವೃದ್ಧರ ನಿರ್ಲಕ್ಷಿಸುವವರಿಗೆ ತಕ್ಕಪಾಠ:
ತಂದೆ ತಾಯಿಯಿಂದ ಆಸ್ತಿಯನ್ನು ವರ್ಗಾಯಿಸಿಕೊಂಡ ನಂತರ ಅವರಿಗೆ ಮೂರು ಹೊತ್ತು ಆಹಾರ, ಮೂಲಭೂತ ಸೌಕರ್ಯಗಳನ್ನೂ ಒದಗಿಸದೇ ನಿರ್ಲಕ್ಷಿಸುವ, ಕಿರುಕುಳ ನೀಡುವ ಮಕ್ಕಳಿಗೆ ನ್ಯಾಯಾಲಯದ ಈ ಆದೇಶ ತಕ್ಕ ಪಾಠ ಕಲಿಸಿದಂತಾಗಿದೆ.
ನ್ಯಾಯಾಲಯದ ಮಹತ್ವದ ಆದೇಶ:
ದಾನಪತ್ರದಲ್ಲಿ “ಮಕ್ಕಳು ನನ್ನ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವುದರಿಂದ ನಿರಂತರ ಆರೈಕೆಯ ನಂಬಿಕೆಯಿಂದ ದಾನ” ಮಾಡಲಾಗಿದೆ ಎಂದು ಸ್ಪಷ್ಟವಾದ ಷರತ್ತು ಉಲ್ಲೇಖಿತವಾಗಿದೆ. ಹಿರಿಯರು ಹೇಳಿದಂತೆ, ಮಕ್ಕಳು ಆ ಷರತ್ತನ್ನು ಪಾಲಿಸದಿರುವುದು ದೃಢಪಟ್ಟ ಕಾರಣ, ಕಲಂ 23(1)ರ ಪ್ರಕಾರ ದಾನಪತ್ರ ರದ್ದುಪಡಿಸಲು ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನ್ಯಾಯಾಲಯದ ಆದೇಶ:
ಉಪವಿಭಾಗಾಧಿಕಾರಿಗಳು ಹಾಗೂ ನ್ಯಾಯ ಮಂಡಳಿಯ ಅಧ್ಯಕ್ಷರಾದ ನಾಹಿದಾ ಜಮ್ ಜಮ್, ಕೆ.ಎ.ಎಸ್. ಅವರು ತಮ್ಮ ಆದೇಶದಲ್ಲಿ, ಉಪನೋಂದಣಾಧಿಕಾರಿಗಳು, ಗುಬ್ಬಿ ಕಛೇರಿಯಲ್ಲಿ ದಾಖಲಾದ ಜಿಬಿಬಿ—1–06849–2021–22, ದಿನಾಂಕ 23—12–2021ರ ದಾನಪತ್ರವನ್ನು “ನಿರರ್ಥಕ” ಎಂದು ಘೋಷಿಸಿ ರದ್ದುಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


