ತುಮಕೂರು: ಸರ್ಕಾರಿ ಭೂಮಿ ಆಸ್ತಿ ರಕ್ಷಣೆಗೆ ಮುಂದಾದ ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಸುಳ್ಳು ಆರೋಪಗಳನ್ನು ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಮುಖಂಡರು, ಎರಡು, ಮೂರು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಪತ್ರಿಕೆಗಳಲ್ಲಿ ಪ್ರಸಾರ ಆಗುತ್ತಿರುವಂತೆ ಹೆಚ್.ಜಿ.ರಮೇಶ್ ಎಂಬುವರು ತುಮಕೂರು ಉಪ ವಿಭಾಗದ ಆಡಳಿತ ಕಚೇರಿ ಮುಂದೆ ಹಣದ ನೋಟುಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತ ಅನವಶ್ಯಕ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿರುತ್ತಾರೆ. ಇದರ ಬಗ್ಗೆ ಉಪ ವಿಭಾಗ ಕಚೇರಿಯಲ್ಲಿ ಮಾಹಿತಿ ಪಡೆದಾಗ ನಿಖರ ಮಾಹಿತಿ ಬಹಿರಂಗವಾಗಿದೆ ಎಂದಿದ್ದಾರೆ.
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಕುಂದೂರು ಗ್ರಾಮದ ಸರ್ವೇ ನಂಬರ್ 19 ರಲ್ಲಿ ದರಖಾಸ್ತು ಜಮೀನು ಮಂಜೂರಾಗಿರುತ್ತದೆ. ಈ ಪಹಣಿಯಲ್ಲಿ ನಮೂದು ಮಾಡಲಾಗಿದ್ದ ಸರ್ಕಾರಿ ನಿಬಂಧನೆ ತೆಗೆಯಲು ಕುಣಿಗಲ್ ತಾಲ್ಲೂಕು ಕಚೇರಿಗೆ ಪಹಣಿದಾರರು ಅರ್ಜಿ ಸಲ್ಲಿಸಿದ್ದರ ಮೇರೆಗೆ ಕಡತವನ್ನು ಕುಣಿಗಲ್ ತಾಲ್ಲೂಕು ಆಪೀಸ್ ನಿಂದ ತುಮಕೂರು ಎ.ಸಿ.ರವರ ಆಫೀಸ್ ಗೆ ಕಳುಹಿಸಲಾಗಿತ್ತು. ಕಡತ ಪರಿಶೀಲಿಸಿದ ಅಧಿಕಾರಿಗಳು ನಾಲ್ಕು ದಿನಗಳಲ್ಲಿ ಕಡತದಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ ಪುನಃ ಕಡತ ಸಲ್ಲಿಸಲು ಕುಣಿಗಲ್ ತಹಶೀಲ್ದಾರ್ ಗೆ ಪತ್ರ ಹಾಕಿದ್ದರು.
ಆದರೆ, ಲಂಚ ನೀಡುವುದು ತಪ್ಪು ಎಂಬ ಮಾಹಿತಿ ಅರಿಯದ ಹೋರಾಟಗಾರರು, ತುಮಕೂರು ಎಸಿ ಕಚೇರಿ ಮುಂದೆ ಕುಳಿತು ಹಣದ ನೋಟುಗಳನ್ನು ಮುಂದಿಟ್ಟುಕೊಂಡು ಸರಕಾರಿ ನೌಕರರಿಗೆ ಲಂಚ ನೀಡುತ್ತೇವೆ ಹಣ ಪಡೆದು ಕೆಲಸ ಮಾಡಿ ಕೊಡಿ ಎಂದು ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡಿರುವುದಲ್ಲದೆ, ಮೂಲ ದಾಖಲೆ ಇಲ್ಲದ, ನಿಯಮ ಬಾಹಿರವಾದ ಕಡತ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಅರಿಯದೆ ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಇಂತಹ ನಿಯಮ ಬಾಹಿರ ಕೆಲಸ ಮಾಡಿಕೊಡಿ ಎಂದು ಒತ್ತಾಯ ಮಾಡಿದ್ದು, ಸರಕಾರಿ ಕೆಲಸಗಳಿಗಾಗಿ ಎ ಸಿ ಕಚೇರಿಗೆ ಬಂದಿದ್ದ ಸಾರ್ವಜನಿಕರನ್ನು ಕೆಲ ಕಾಲ ತೊಂದರೆ ಅನುಭವಿಸುವಂತೆ ಮಾಡಿರುತ್ತಾರೆ ಎಂದು ಆರೋಪಿಸಿದರು.
ಕಾರ್ಯಾಂಗವನ್ನು ಸರಿ ಮಾಡಬೇಕಾಗಿರುವ ಹೋರಾಟಗಾರರು ಸ್ಪಷ್ಟ ಮಾಹಿತಿ ಪಡೆದು ನಿಯಮಾನುಸಾರ ವಿಷಯಗಳ ಬಗ್ಗೆ ಹೋರಾಟ ಮಾಡಲಿ, ವಿನಾಕಾರಣ ಗೊಂದಲ ಸೃಷ್ಟಿಸುತ್ತಿರುವುದನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಅನಗತ್ಯವಾಗಿರುವ ಈ ಗೊಂದಲದ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕ್ರಮವನ್ನು ತುಮಕೂರು ಜಿಲ್ಲೆಯ ದಲಿತ ಪರ ಸಂಘಟನೆಗಳು, ಸಾಮಾಜಿಕ ನ್ಯಾಯಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


