ಬೆಂಗಳೂರು: ಕನ್ನಡದ ಹಿರಿಯ ನಟ ಎಂ.ಎಸ್.ಉಮೇಶ್ ತಮ್ಮ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದಲೂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಿಗ್ಗೆ 8:30ರ ಸುಮಾರಿಗೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಏಪ್ರಿಲ್ 22, 1945ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ಉಮೇಶ್ ಅವರು ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾಗಿ 1948ರಿಂದಲೂ ಸಕ್ರಿಯರಾಗಿದ್ದರು. 1960ರಲ್ಲಿ ಬಿ.ಆರ್ ಪಂಥುಲು ನಿರ್ದೇಶನದ ಮಕ್ಕಳ ರಾಜ್ಯ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಭಾಗ್ಯವಂತರು, ಕಿಲಾಡಿ ಜೋಡಿ, ಕಾಮನಬಿಲ್ಲು, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಶೃತಿ ಸೇರಿದಾಗ, ನನ್ನಾಸೆಯ ಹೂವೆ, ಜಾಕಿ, ಮುಸ್ಸಂಜೆ ಮಾತು, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ, ಗೋಲ್ಮಾಲ್ ರಾಧಾಕೃಷ್ಣ ಚಿತ್ರದಲ್ಲಿ ಉಮೇಶ್ ಅವರು ಮಾಡಿರುವ ಪಾತ್ರ ದೊಡ್ಡ ಹಿಟ್ ಆಗಿತ್ತು. ಆ ಚಿತ್ರದಲ್ಲಿ “ಅಯ್ಯೋ ನನ್ನ ಅಪಾರ್ಥ ಮಾಡ್ಕೊಂಡ್ಬಿಟ್ರಲ್ಲ” ಎನ್ನುವ ಡೈಲಾಗ್ ಇಂದಿಗೂ ಸಿನಿಮಾ ಪ್ರಿಯರು ಮರೆತಿಲ್ಲ.
ರಂಗಭೂಮಿ ಮತ್ತು ಚಿತ್ರರಂಗಗಳೆರಡರಲ್ಲೂ ತಮ್ಮದೇ ಛಾಪು ಮೂಡಿಸಿರುವ ಪ್ರತಿಭಾವಂತ ಎಂ. ಎಸ್. ಉಮೇಶ್, ಬಾಲ ಕಲಾವಿದ ಹಾಗೂ ಹಾರೋನಿಯಂ ವಾದಕವಾಗಿ ರಂಗ ಪ್ರವೇಶ ಮಾಡಿದ್ದರು. ಉಮೇಶ್ ಅವರು ಮಾಸ್ಟರ್ ಹಿರಣ್ಣಯ್ಯ ನಾಟಕ ಮಂಡಳಿ, ಗುಬ್ಬಿ ಕಂಪನಿ, ಕನ್ನಡ ಥಿಯೇಟರ್ ನಾಟಕ ಸಂಸ್ಥೆಗಳಲ್ಲಿ ಪಾತ್ರ ನಿರ್ವಹಿಸಿದರು.
1960ರಲ್ಲಿ ‘ಮಕ್ಕಳ ರಾಜ್ಯ’ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿ ತೆರೆಗೆ ಬಂದರು. ಮತ್ತೆ ರಂಗಭೂಮಿಗೆ ಹಿಂತಿರುಗಿದ ಅವರಿಗೆ ಬೆಳ್ಳಿತೆರೆ ಅವಕಾಶ ಸಿಕ್ಕಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ ಚಿತ್ರದ ‘ಮುನಿ ತಾಯಿ’ ಭಾಗದ ತಿಮ್ಮರಾಯಿ ಪಾತ್ರದ ಮೂಲಕ. ಆ ಚಿತ್ರ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದು ಕೊಟ್ಟಿತು. ಅಲ್ಲಿಂದ ಇಲ್ಲಿವರೆಗೆ 350 ಚಿತ್ರಗಳಲ್ಲಿ ಅಭಿನಯಿಸಿರುವ ಉಮೇಶ್ ಹಾಸ್ಯ ಪಾತ್ರಕ್ಕೆ ಹೊಸ ಸಂಚಲನ ತಂದರು. ‘ಬೆಂಕಿ’ ಚಿತ್ರದಲ್ಲಿ ನಾಯಕರಾಗಿದ್ದ ಅವರು ‘ವೆಂಕಟ್ ಇನ್ ಸಂಕಟ’ದಲ್ಲಿ ಅಡುಗೂಲಜ್ಜಿಯಾಗಿ ರೂಪಾಂತರಗೊಂಡಿದ್ದರು. ಇದಲ್ಲದೇ ಚಿತ್ರಕತೆ–ಸಂಭಾಷಣೆ ಗೀತ ರಚನೆ ಕೂಡ ಮಾಡಿರುವ ಉಮೇಶ್ ಪ್ರತಿಷ್ಠಿತ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಉಮೇಶ್, ಗಟ್ಟಿ ಕೃತಿಗಳನ್ನು ರಚಿಸಿರುವ ಬರಹಗಾರರೂ ಕೂಡ ಹೌದು.
ಕನ್ನಡದ ದಿಗ್ಗಜ ನಟರಾದ ಡಾ. ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್‍ಕುಮಾರ್, ಶಿವರಾಜ್ಕುಮಾರ್ ಹೀಗೆ ಸಾಕಷ್ಟು ನಟರ ಸಿನಿಮಾಗಳಲ್ಲಿ ಉಮೇಶ್ ಅಭಿನಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


