ಸರಗೂರು: ಹುಲಿ ದಾಳಿಯಿಂದಾಗಿ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಡದೆ ಹೋದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದು ಹೇಗೆ ಎಂದು ಜೆಡಿಎಸ್ ನ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ರೋಡ್ ಶೋ ನಡೆಸಿದ ನಂತರ ಹುಲಿ ದಾಳಿಗೆ ಮೃತಪಟ್ಟ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯತೆಯನ್ನು ಇಟ್ಟುಕೊಂಡು ಅಸಂಬದ್ಧವಾಗಿ ನಡೆಕೊಂಡು ಇವತ್ತು ಸಫಾರಿಗಳನ್ನ ಬಂದ್ ಮಾಡೋದ್ರಿಂದ ಸುತ್ತಮುತ್ತಲಿನ ಜನಕ್ಕೆ ಜೀವನೋಪಾಯಕ್ಕೆ ತುಂಬಾ ಕಷ್ಟವಾಗಿದೆ. ಹೌದಪ್ಪ ತಪ್ಪಾಗಿದೆ, ಆ ತಪ್ಪಿಗೆ ಸರಿಯಾದ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದು ಇನ್ನೂ ಸರ್ಕಾರದ ಕಡೆಯಿಂದ ಏನು ಚರ್ಚೆಯಾಗಿಲ್ಲ. ಹುಲಿ ದಾಳಿಯಿಂದ ಸತತವಾಗಿ ನಡೆದರೂ ಪುಣ್ಯಾತ್ಮರನ್ನ ನೋಡಲಿಕ್ಕೂ ಕೂಡ ಸಚಿವರು ಇಲ್ಲಿ ಬರಲಿಲ್ಲ, ಮೈಸೂರಿಗೆ ತರಿಸಿಕೊಂಡ್ರು, ಮತ್ತೆ ಯಾವ ಪುರುಷಾರ್ಥಗೋಸ್ಕರ ಇವತ್ತು ಅರಣ್ಯ ಸಚಿವರಾಗಿದ್ದಾರೆ ಎಂದು ಪ್ರಶ್ನಿಸಿದರು.
ಈ ಭಾಗದ ರೈತರ ಜೊತೆ ನಾವು ನಿಲ್ಲುತ್ತೇವೆ ಅನ್ನೋದನ್ನ ಈ ಸಂದರ್ಭದಲ್ಲಿ ಹೇಳುತ್ತಿದ್ದಾನೆ, ಮತ್ತೊಮ್ಮೆ ರೈತನ ನಾಯಕರಾದ ಕುಮಾರಣ್ಣರವರು ಮುಖ್ಯಮಂತ್ರಿಯಾಗಿ ಬರಬೇಕು ಎಂದು ಪಣತೊಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಭಿವೃದ್ಧಿ ಶೂನ್ಯ:
ಎಚ್.ಡಿ.ಕೋಟೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ತಾಲೂಕಿನ ಅಭಿವೃದ್ಧಿಗೆ ವಿಶೇಷವಾದಂತಹ ಮುತುವರ್ಜಿ ವಹಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಲು ನಾನು ಜೊತೆಯಲ್ಲಿ ಇರುತ್ತೇನೆ. ಸರಗೂರು ತಾಲೂಕಿನಲ್ಲಿ ಹುಲಿ ದಾಳಿಗೆ ಸಿಲುಕಿ ಹಲವಾರು ಕುಟುಂಬಗಳು ಬಲಿಪಶುಗಳಾಗಿವೆ, ಹುಲಿಗಳು ಕಾಡಿನಿಂದ ಗ್ರಾಮಗಳ ಕಡೆಗೆ ಬರುತ್ತಿರುವುದಕ್ಕೆ ಸರ್ಕಾರದ ಕಡೆಯಿಂದ ಏನು ಕ್ರಮ ಕೈಗೊಂಡಿದ್ದಾರೆ ಅನ್ನೋದನ್ನ ನಾವು ಸರ್ಕಾರದ ಮುಂದೆ ಪ್ರಶ್ನೆ ಇರಬೇಕಾಗುತ್ತದೆ, ಹುಲಿ ದಾಳಿಯಿಂದ ಜೀವ ಕಳೆದುಕೊಂಡ ಪ್ರಕರಣಗಳು ಮುಂದುವರಿದಿದೆ ಎಂದರು.
ಸಫಾರಿಗಳನ್ನ ನಿಲ್ಲಿಸುವುದರಿಂದ ಹುಲಿಗಳು ದಾಳಿ ಮಾಡಲ್ವಾ, ಹಾಗಾದ್ರೆ ಸರ್ಕಾರ ಕಣ್ಣು ಮುಚ್ಚಿ ಕೂತಿದೆ, ಈ ಹುಲಿ ದಾಳಿ ವಿಚಾರ ಸೆಷನ್ ಅಲ್ಲೂ ಕೂಡ ತುಂಬಾ ಗಂಭೀರವಾಗಿ ಚರ್ಚೆ ಆಗಬೇಕು, ಎಂದು ಕುಮಾರಣ್ಣನವರು ಹೇಳಿದ್ದಾರೆ, ಇದಕ್ಕೆಲ್ಲ ಕಾರಣ ಸರ್ಕಾರವೇ ಹೊಣೆ, ನಿರ್ವಹಣೆ ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತದೆ, ಸರ್ಕಾರ ಕೊಡುವ ಪರಿಹಾರ ಯಾವುದೇ ಕಾರಣಕ್ಕೂ ಸಾಲುವುದಿಲ್ಲ ಎಂದರು.
ಸಿಎಂ ಕುರ್ಚಿ ವಿಚಾರ:
ಇನ್ನೂ ಸಿಎಂ ಕುರ್ಚಿ ಗಲಾಟೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ನಮ್ಮ ವಿಪರ್ಯಾಸ, ಚರ್ಚೆ ಮಾಡಲು ಹಲವಾರು ವಿಚಾರಗಳಿದ್ದರೂ ಕೂಡ ಕುರ್ಚಿ ವಿಚಾರ ಬಹಳ ಚರ್ಚೆ ಆಗ್ತಿದೆ, ಈ ಸರ್ಕಾರ ಬಂದ್ಮೇಲೆ ಶಿಕ್ಷಕರ ನೇಮಕಾತಿಯಾಗಿದೆಯಾ? ಆಗಿಲ್ಲ, ಕಾಂಗ್ರೆಸ್ ನಲ್ಲಿ ಯಾರ ನಾಯಕತ್ವಕ್ಕೆ ನಾವು ಬೆಂಬಲ ಕೊಡಬೇಕು? ಯಾರ ನಾಯಕತ್ವಕ್ಕೆ ನಾವು ಬೆಂಬಲ ಕೊಡಬಾರದು ಅನ್ನೋದು ತುಂಬಾ ಕನ್ಫ್ಯೂಸ್ ನಲ್ಲಿ ಇದ್ದಾರೆ, ತುಂಗಭದ್ರ ಡ್ಯಾಮ್ ನಲ್ಲಿ 19ನೇ ಟ್ರಸ್ಟ್ ಗೇಟ್ ಕಿತ್ಕೊಂಡು ಹೋಗಿದೆ, 52 ಕೋಟಿಗೆ ಟೆಂಡರ್ ಕರೆದರು ಗುಜರಾತ್ ಕಂಪನಿ ಬಂದು ಟೆಂಡರ್ ತಗೊಂಡ್ರು, 11 ಕೋಟಿ ವರ್ಕ್ ಆಗಿದೆ. ಆದರೆ ಬಿಲ್ ಬಿಡುಗಡೆ ಮಾಡಿಲ್ಲ, ಕರ್ನಾಟಕದಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ಅಧಿಕಾರ ಮಾಡಬಾರದು, ಕಾಂಗ್ರೆಸ್ ಪಕ್ಷದಲ್ಲಿರುವಂತ ರಾಷ್ಟ್ರೀಯ ನಾಯಕರಿಗೆ ಅವರು ನಿಲುವಿನ ಬಗ್ಗೆ ಗೊಂದಲ ಇದ್ದಾಗ ನಾವೇನು ಹೇಳಲಿಕ್ಕೆ ಸಾಧ್ಯ, ಕೇವಲ ತಾಲೂಕು ಕೇಂದ್ರವನ್ನ ಘೋಷಣೆ ಮಾಡೋದ್ರಿಂದ ತಾಲೂಕು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ, ತಾಲೂಕಿಗೆ ಸರಿಯಾದ ಕಟ್ಟಡಗಳು ಅಧಿಕಾರಿಗಳನ್ನು ನೇಮಿಸಿ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ ಒದಗಿಸಿ ಕೊಡುವುದು ಮುಖ್ಯ ಎಂದರು.
ರೋಡ್ ಶೋ ಮುನ್ನ ಪಡವಲು ವೀರಕ್ತ ಮಠ ಹಾಗೂ ಹಂಚೀಪುರ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಯ ಆರ್ಶೀವಾದ ಪಡೆದು ನಂತರ ಹುಲಿ ದಾಳಿಗೆ ಮೃತಪಟ್ಟ ಮನೆಗಳಿಗೆ ಭೇಟಿ ನೀಡಿ ಅವರಿಗೆ ಸಾಂತ್ವನ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರ ಅಶ್ವಿನಿ ಕುಮಾರ್, ಮುಖಂಡ ಕೆ.ಎಂ.ಕೃಷ್ಣನಾಯಕ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ರಾದ ಜಿ.ಗೋಪಾಲಸ್ವಾಮಿ, ರಾಜೇಂದ್ರ, ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್, ಹೂವಿನಕೊಳ ಮಹೇಂದ್ರ, ಎಚ್.ಹನು, ವಕೀಲ ಪ್ರಶಾಂತ್, ಬೆಟ್ಟನಾಯಕ, ವಾಲ್ಮೀಕಿ ಸಿದ್ದರಾಜು, ರಮೇಶ್, ಶಿವಕುಮಾರ್, ಶಿವರಾಜು, ಬಿ.ಜೆ.ಆಶೋಕ್ ಕುಮಾರ್, ಉದಯಕುಮಾರ್, ಪರಶಿವ, ಶಿವಲಿಂಗಯ್ಯ, ನಿಂಗರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


