ತುಮಕೂರು: ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕವೇ ವಿದ್ಯಾರ್ಥಿಗಳು ಭವಿಷ್ಯವನ್ನು ಸುಂದರಗೊಳಿಸಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಧ್ಯಕ್ಷರಾದ ಡಾ.ಸುರೇಶ್ ಬಿ.ಕೆ. ಹೇಳಿದರು.
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಎಂ.ಕಾಂ. ವತಿಯಿಂದ ಗುರುವಾರ ಆಯೋಜಿಸಿದ್ದ 13ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ 42 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ನಂತರ ಮಾತನಾಡಿದರು.
“ಪದವಿ ಪಡೆದುಕೊಂಡ ನಂತರ ಹೊರಜಗತ್ತಿಗೆ ಕಾಲಿಡುವ ಈ ಹಂತದಲ್ಲಿ ಯಾವ ಕಾಲೇಜಿನಲ್ಲಿ ಕಲಿತಿದ್ದೀರಿ ಎಂಬುದರ ಜೊತೆಗೆ ಯಾವ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುತ್ತೀರಿ ಎಂಬುದು ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಮಾದರಿ ಜೀವನ ರೂಪಿಸಿಕೊಳ್ಳುತ್ತಾ ಕಾರ್ಯನಿರ್ವಹಿಸಬೇಕು” ಎಂದರು.
ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವರಾದ ಅಶೋಕ್ ಮೆಹ್ತಾ ಮಾತನಾಡಿ, “13ನೇ ಪದವಿ ಪ್ರಧಾನ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಇಂದಿನ ಸಮಾಜಕ್ಕೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು. ಹಿಂದೆ ನಡೆದದ್ದಲ್ಲ, ಮುಂದೆ ನಡೆಯಲಿರುವುದನ್ನಲ್ಲ– ಪ್ರಸ್ತುತತೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು” ಎಂದು ಸಲಹೆ ನೀಡಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ, ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷಾ, ಎಂ.ಕಾಂ ವಿಭಾಗದ ಮುಖ್ಯಸ್ಥರಾದ ಸೈಯದ್ ಬಾಬು ಹೆಚ್.ಪಿ., ಬಿ.ಕಾಂ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಎಂ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಂಗಸ್ವಾಮಿ ಎಂ.ಆರ್. ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


