ತುಮಕೂರು: ಸಣ್ಣ ಉದ್ದಿಮೆದಾರರೊಬ್ಬರಿಗೆ ಸಹಾಯ ಧನ ಮಂಜೂರು ಮಾಡಲು 1.15 ಲಕ್ಷ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಸಹಾಯಕ ಎನ್.ಎಸ್.ಪ್ರಸಾದ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಒಟ್ಟು 1.25 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದು. ಮುಂಗಡವಾಗಿ 10 ಸಾವಿರ ಹಣ ಪಡೆದುಕೊಂಡಿದ್ದರು. ಗುರುವಾರ ಮಧ್ಯಾಹ್ನ ಉಳಿದ 1.15 ಲಕ್ಷ ಹಣ ತೆಗೆದುಕೊಳ್ಳುವ ಸಮಯದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
ನಗರದ ವಿಜಯನಗರ ಬಡಾವಣೆಯ ಎಂ.ಎಸ್.ಚನ್ನಬಸವೇಶ್ವರ ಅವರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶಿವಲಿಂಗ ಇಂಡಸ್ಟ್ರೀಸ್ ಸ್ಥಾಪಿಸಿ ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಸುತ್ತಿದ್ದಾರೆ. ಮೊದಲ ಬಾರಿಗೆ ಸಣ್ಣ ಉದ್ದಿಮೆ ಆರಂಭಿಸಿದವರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡಲಾಗುತ್ತಿದೆ. ಹಾಗಾಗಿ ಸಹಾಯ ಧನ ಮಂಜೂರು ಮಾಡುವಂತೆ ಕೋರಿ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ) ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು.
ಚನ್ನಬಸವೇಶ್ವರ ಅವರಿಗೆ 18.75 ಲಕ್ಷ ಸಹಾಯ ಧನ ಮಂಜೂರು ಮಾಡಬೇಕಿತ್ತು. ಈ ಹಣ ಮಂಜೂರು ಮಾಡಿಕೊಡಲು ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಅವರ ಸಹಾಯಕ ಎನ್.ಎಸ್.ಪ್ರಸಾದ್ 71.25 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಮುಂಗಡವಾಗಿ 10 ಸಾವಿರ ಪಡೆದುಕೊಂಡಿದ್ದರು. ಉಳಿದ 1.15 ಲಕ್ಷ ಹಣವನ್ನು ನಗರದ ಬಿ.ಎಚ್.ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿ ಮುಂಭಾಗ ಲಿಂಗರಾಜು ಪರವಾಗಿ ಪ್ರಸಾದ್ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಎಂ.ಸಂತೋಷ್, ಎಂ.ಮಂಜುನಾಥ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಕೆ.ಸುರೇಶ, ಬಿ.ಮೊಹಮ್ಮದ್ ಸಲೀಂ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


