ಬೆಳಗಾವಿ: ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬರೋಬ್ಬರಿ 3,450 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಭಾಗದ ಬಹುಕಾಲದ ಬೇಡಿಕೆಯಾದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರಮುಖ ನೀರಾವರಿ ಯೋಜನೆಗಳು:
ಬಾಗಲಕೋಟೆ: ಬಾದಾಮಿ ಮತ್ತು ಬೀಳಗಿ ಭಾಗದ ಕೆರೂರು ಏತ ನೀರಾವರಿ ಯೋಜನೆಗೆ 1,503 ಕೋಟಿ ರೂ.ಗಳ ಪರಿಷ್ಕೃತ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 990 ಕೋಟಿ ರೂ.ಗಳ ಯೋಜನೆಗೆ ಚಾಲನೆ ದೊರೆತಿದೆ.
ಬೆಳಗಾವಿ: ರಾಯಬಾಗ ಮತ್ತು ಚಿಕ್ಕೋಡಿ ಭಾಗದ ಏತ ನೀರಾವರಿ ಯೋಜನೆಗಳಿಗೆ ಸುಮಾರು 400 ಕೋಟಿ ರೂ. ಮೀಸಲಿಡಲಾಗಿದೆ.
ಕೊಪ್ಪಳ: ಯಲಬುರ್ಗಾ ಮತ್ತು ಕುಕನೂರು ತಾಲೂಕಿನ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ 272 ಕೋಟಿ ರೂ.ಗಳ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.
ನ್ಯಾಯಾಂಗ ಸುಧಾರಣೆ ಮತ್ತು AI ಬಳಕೆ: ನ್ಯಾಯಾಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲು ‘ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ಮಸೂದೆ-2025’ಕ್ಕೆ ಸಂಪುಟ ಅಸ್ತು ಎಂದಿದೆ. ಇದರ ಅನ್ವಯ, ಜಿಲ್ಲಾ ನ್ಯಾಯಾಲಯಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಪ್ರಕರಣಗಳ ವಿಂಗಡಣೆ ಮಾಡಲಾಗುವುದು. ಅಲ್ಲದೆ, ರೈತರ ಮತ್ತು ನಾಗರಿಕರ ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ‘ತ್ವರಿತ ನ್ಯಾಯಾಲಯ’ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಬಡವರ ಹಿತದೃಷ್ಟಿಯಿಂದ ‘ಇಂದಿರಾ ಕಿಟ್’ನಲ್ಲಿ ಹೆಸರು ಕಾಳಿನ ಬದಲಿಗೆ ತೊಗರಿ ಬೇಳೆ ನೀಡುವ ಪ್ರಸ್ತಾವನೆಗೆ ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಲಾಗಿದೆ. ಆದರೆ, ಸಿವಿಲ್ ಹುದ್ದೆಗಳ ಮುಂಬಡ್ತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


