ಸರಗೂರು: ಸಂಗೀತ, ಕಲೆ, ನೃತ್ಯ ಸೇರಿದಂತೆ ನಾನಾ ಪ್ರಕಾರಗಳನ್ನು ಒಳಗೊಂಡಿರುವ ನಾಟಕ, ಬದುಕನ್ನು ಕಟ್ಟಿಕೊಡುವ ಜತೆಗೆ ಸಾಮರಸ್ಯ ಬೆಳೆಸುತ್ತದೆ ಎಂದು ರಂಗಭೂಮಿ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ.ಎಂ.ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್ ಎಸ್ ಶಿವರಾತ್ರಿ ಶಿವಾನುಭವ ಮಂಗಳ ಮಂಟಪದಲ್ಲಿ ಜೆಎಸ್ ಎಸ್ ಕಲಾಮಂಟಪದಿಂದ ಶುಕ್ರವಾರದಂದು ನಡೆದ ಜೆಎಸ್ ಎಸ್ ರಂಗೋತ್ಸವ ಸಮಾರೋಪ ಸಮಾರಂಭದಲ್ಲಿ ಶ್ರೀ ಗಳ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನಾಟಕ ಒಂದು ಸಂಕೀರ್ಣ ಕಲೆಯಾಗಿದ್ದು, ಅದಕ್ಕೆ ಜಾತಿಭೇದದ ಅಡ್ಡಗೋಡೆಗಳಿಲ್ಲ. ಅದು ನಮ್ಮ ಬದುಕನ್ನು ಕಟ್ಟಿಕೊಡುವುದರ ಜತೆಗೆ ದೂರವಾಗಿರುವ ಮನಸ್ಸುಗಳನ್ನು ಒಂದು ಗೂಡಿಸಲಿದೆ. ನಾವು ಹೇಗೆ ಮಾತನಾಡಬೇಕು ಎಂಬ ಭಾಷೆ ಕಲಿಸಿಕೊಡುತ್ತದೆ. ನೀವು ಪ್ರಸ್ತುತ ಗಳಿಸುತ್ತಿರುವ ಶಿಕ್ಷ ಣ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದ್ದು, ಅದು ಪೂರ್ಣ ಸಾಧನೆಯಲ್ಲ. ನಾಟಕ, ನೃತ್ಯ ಸೇರಿದಂತೆ ಸುಮಾರು 64 ಕಲೆಗಳಲ್ಲಿ ಯಾವುದಾದರೂ ಒಂದು ಅಥವಾ ಎರಡರಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಬೇಕು. ಹಾಗಾದಾಗ ಜೀವನದಲ್ಲಿ ಪರಿಪೂರ್ಣತೆ ದೊರೆಯುತ್ತದೆ ಎಂದರು.
ನಾಟಕಾಭಿನಯ ಭಾಷೆಯ ಸ್ಪಷ್ಟ ಉಚ್ಛಾರಣೆಗೆ ಅವಕಾಶ ಮಾಡಿಕೊಡಲಿದ್ದು, ಜ್ಞಾನ, ಬೌದ್ಧಿಕ, ದೈವಿಕ ಹಾಗೂ ವ್ಯಕ್ತಿತ್ವ ವಿಕಸನ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿದ್ದರೆ, ಮಕ್ಕಳಲ್ಲಿ ರಂಗಾಸಕ್ತಿ ಬೆಳೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ ಎಸ್ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಮಾತನಾಡಿ ಶಿಕ್ಷ ಣ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ರಂಗಭೂಮಿ ಪೂರಕವಾಗಿದ್ದು, ಬೋಧನೆ ಮಾಡುವ ಜತೆಗೆ ಅಭಿನಯ ಮಾಡುವ ಸಾಮರ್ಥ್ಯ ಲಭ್ಯವಾಗಲಿದೆ ಎಂದು ತಿಳಿಸಿದರು.
ಕಲೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಪರಿಪೂರ್ಣತೆ ತುಂಬಿ ವ್ಯಕ್ತಿತ್ವವನ್ನು ರೂಪಿಸುತ್ತವೆ, ಒಮ್ಮೆ ರಂಗಭೂಮಿಗೆ ಕಾಲಿಟ್ಟರೆ ಅದು ಆತ್ಮಸ್ಥೈರ್ಯವನ್ನು ತುಂಬಿ, ಕೌಶಲ್ಯತೆಯನ್ನು ಕಲಿಸುತ್ತದೆ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರತೆಗೆಯಲು ಇಂತಹ ವೇದಿಕೆಗಳು ಅತ್ಯಗತ್ಯ ಎಂದರು.
ಅಭಾವೀಲಿಂ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಭಕ್ತ ಬಳಗ ಗೌರವಾಧ್ಯಕ್ಷ ದಡದಹಳ್ಳಿ ಶಿವರಾಜಪ್ಪ, ಮುಖಾಮುಖಿ ಮಾಡಿ ಚರ್ಚೆ ನಡೆಸಿ, ಜನರ ಮನಸ್ಸಿನ ಮೇಲೆ, ಪ್ರಭಾವ ಬೀರಿ, ಒಳ್ಳೆಯದನ್ನು ಪ್ರಚುರಪಡಿಸುತ್ತದೆ. ಆದ್ದರಿಂದಲೇ ಕಲೆಗಳಲ್ಲಿ ರಂಗಭೂಮಿಗೆ ಪ್ರಮುಖ ಸ್ಥಾನವಿದೆ. ಕಲಾ ಮಂಟಪನ್ನು ಸ್ಥಾಪಿಸಿ, ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿ ಕಲೆಯನ್ನು ಕಲಿಸಿ, ಅದನ್ನು ಉಳಿಸಿ, ಬೆಳಸುತ್ತಿರುವ ಜೆಎಸ್‌ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಯಾವುದೇ ಕ್ಷೇತ್ರದಲ್ಲಿ ಸಾಗಿದರೂ ಅಲ್ಲಿ ಪ್ರಾಮಾಣಿಕತೆ ಇರಬೇಕು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಪ್ರತಿಭೆಗಳು ಹೊರಬರುತ್ತವೆ, ವಿದ್ಯಾರ್ಥಿಗಳು ಸಹ ಇಂತಹ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದರು.
ಪ್ರಾಸ್ತಾವಿಕ ಭಾಷಣ ರಂಗೋತ್ಸವ ಸಂಯೋಜಕ ಚಂದ್ರಶೇಖರ್ ಅಚಾರ್ ಮಾತನಾಡಿ, ದೇಶದಲ್ಲಿ ಶಿಕ್ಷಣದ ಜೊತೆ ರಂಗಭೂಮಿ ಶಿಕ್ಷಣವನ್ನು ಕಲಿಸುವಂತಹ ಸಂಸ್ಥೆ ಎಂದರೆ ಅದು ಜೆಎಸ್ ಎಸ್ ಸಂಸ್ಥೆ, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಉನ್ನತ ಸ್ಥಾನಕ್ಕೇರಿದ್ದಾರೆ, ಜೊತೆಗೆ ಸಾಧನೆ ಮಾಡಿರುವವರು ಸಹ ರಂಗಭೂಮಿಯಿಂದ ಹೋದವರೆ, ಆದ್ದರಿಂದಲೇ ರಂಗಭೂಮಿ ಭೂಮಿಯಷ್ಟೇ ತೂಕದದ್ದು ಎಂದರು.
ಈ ಸಂದರ್ಭದಲ್ಲಿ ಅಭಾವೀಲಿಂ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗವರ ಭಕ್ತ ಬಳಗ ಗೌರವಾಧ್ಯಕ್ಷ ದಡದಹಳ್ಳಿ ಶಿವರಾಜಪ್ಪ, ಬಸವ ಬಳಗ ತಾಲೂಕು ಘಟಕ ಅಧ್ಯಕ್ಷ ಹಂಚೀಪುರ ಗಣಪತಿ, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗವರ ಭಕ್ತ ಬಳಗ ಅಧ್ಯಕ್ಷ ಮಹೇಶ್ ಮನುಗನಹಳ್ಳಿ, ಜೆಎಸ್ ಎಸ್ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ, ಮುಖ್ಯ ಶಿಕ್ಷಕ ಜಯಣ್ಣ, ರಂಗೋತ್ಸವ ಸಂಯೋಜಕ ಚಂದ್ರಶೇಖರ್ ಅಚಾರ್, ಶಾಲಾ ಕಾಲೇಜು ಮಕ್ಕಳು ಹಾಗೂ ಶಿಕ್ಷಕರು ಇನ್ನೂ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


