ಕೊರಟಗೆರೆ : ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣವಷ್ಟೇ ಸಾಕಾಗುವುದಿಲ್ಲ; ಅದರ ಜೊತೆಗೆ ನೈತಿಕತೆ, ಮೌಲ್ಯಧಾರಿತ ಬದುಕು ಮತ್ತು ಮಾನವೀಯ ಗುಣಗಳನ್ನು ರೂಪಿಸುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿರುವ ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಶ್ರೀಗಳ ಆಶೀರ್ವಾದ ಪಡೆದು, ನಂತರ ಮಠದ ಸದ್ವಿದ್ಯಾ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರಿಗೆ ಬಾಲ್ಯದಲ್ಲೇ ಸತ್ಯನಿಷ್ಠೆ, ಶಿಸ್ತು, ಸಮಾಜಪರ ಜವಾಬ್ದಾರಿ ಹಾಗೂ ಮೌಲ್ಯಾಧಾರಿತ ಚಿಂತನೆಗಳನ್ನು ಬೆಳೆಸಬೇಕಿದೆ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಸ್ತ್ರವಾಗಿದ್ದು, ಯುವಜನತೆ, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ಕಲಿಕೆಯ ಜೊತೆಗೆ ಒದಗಿಸಬೇಕು. ಕೇವಲ ಅಂಕಗಳಿಗಾಗಿ ಓದುವ ಶಿಕ್ಷಣವಲ್ಲದೆ, ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಣವೇ ಸಮಾಜವನ್ನು ಸುಧಾರಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಠದ ವತಿಯಿಂದ ನಡೆಯುತ್ತಿರುವ ಶೈಕ್ಷಣಿಕ ಮತ್ತು ಸಂಸ್ಕೃತಿಪರ ಚಟುವಟಿಕೆಗಳನ್ನು ಶ್ಲಾಘಿಸಿದ ಸಂತೋಷ್ ಹೆಗಡೆ ಅವರು, ಸಂಸ್ಕೃತಿ ಮತ್ತು ಮೌಲ್ಯಗಳ ಆಧಾರದ ಮೇಲೆ ನಡೆಯುವ ಶಿಕ್ಷಣವೇ ದೇಶದ ಭವಿಷ್ಯಕ್ಕೆ ಭದ್ರವಾದ ನೆಲೆಯನ್ನು ನಿರ್ಮಿಸುತ್ತದೆ ಎಂದು ತಿಳಿಸಿದರು.
ಶ್ರೀ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಹೆಗಡೆಯವರ ಕಾರ್ಯವೈಕರಿಯನ್ನು ಪ್ರಶಂಶಿಸಿದವರು, ಸಮಾಜದಲ್ಲಿ ಮಕ್ಕಳುಗಳು ಗಣ್ಯಮಾನ್ಯರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಸಾಗಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸದ್ವಿದ್ಯಾ ಸಂಸ್ಕೃತ ಪಾಠ ಶಾಲೆಯ ಶಿಕ್ಷಕಿಯರಾದ ಬ್ರಹ್ಮರಾಂಬ, ರಘು, ಸೇರಿದಂತೆ ಮಠದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


