ಮಂಡ್ಯ: ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯವಾಗಿ ಒಡೆಯುವ ಷಡ್ಯಂತ್ರಗಳು ನಡೆಯುತ್ತಿವೆ, ಆದರೆ ಯಾವುದೇ ಶಕ್ತಿಯಿಂದ ಈ ಸಮುದಾಯವನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಪಾದಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಧಿಕಾರಕ್ಕಾಗಿ ‘ಕುರ್ಚಿ ಕಾಳಗ’ ನಡೆಯುತ್ತಿರುವ ಈ ಸಮಯದಲ್ಲಿ, ಧಾರ್ಮಿಕ ಕಾರ್ಯಕ್ರಮಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಸುತ್ತೂರು ಮಠದ ಪರಂಪರೆಯನ್ನು ಸ್ಮರಿಸಿದ ವಿಜಯೇಂದ್ರ, ಮಠವು ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ನೊಂದವರ ಬಾಳಿಗೆ ಬೆಳಕಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಮಠಗಳಿಗೆ ಅನುದಾನ ನೀಡಿ, ಬಸವಣ್ಣನವರ ‘ಅನುಭವ ಮಂಟಪ’ ನಿರ್ಮಾಣಕ್ಕೆ ಒತ್ತು ನೀಡಿದ್ದರು. ವೀರಶೈವ ಲಿಂಗಾಯತ ಸಮಾಜವು ಒಳಪಂಗಡಗಳನ್ನು ಮರೆತು ಒಂದಾಗಬೇಕು ಮತ್ತು ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಳವಳ್ಳಿಯ ಐತಿಹಾಸಿಕ ಮಹತ್ವವನ್ನು ಕೊಂಡಾಡಿದರು. ನಿವೃತ್ತ ಡಿಜಿಪಿ ಶಂಕರ್ ಬಿದರಿ ಮಾತನಾಡಿ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ, ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಹಾಗೂ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


