ಬೆಂಗಳೂರು/ಟಿ. ದಾಸರಹಳ್ಳಿ: ಕಾನೂನು ಜಾಗೃತಿ, ಸಮಾಜ ಸೇವೆ, ಉದ್ಯೋಗ ಸೃಷ್ಟಿ, ಶಿಕ್ಷಣ ಹೋರಾಟ ಹಾಗೂ ಜನಪರ ಪತ್ರಿಕೋದ್ಯಮದ ಕ್ಷೇತ್ರಗಳಲ್ಲಿ ನಿರಂತರ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ ವಕೀಲರು, ಸಮಾಜ ಸೇವಕರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಗೌರವಿಸುವ ಉದ್ದೇಶದಿಂದ VPK ಲಾ ಎನ್ ಜಿಒ ಗ್ರೂಪ್ಸ್ ಇಂಡಿಯಾ ವತಿಯಿಂದ ಸಮಾಜ ಸೇವಾ ರತ್ನ ಹಾಗೂ ಸೂಪರ್ ಲಾಯರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಟಿ. ದಾಸರಹಳ್ಳಿಯಲ್ಲಿರುವ ಸಂಸ್ಥೆಯ ಕಚೇರಿ ಆವರಣದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವೆಂಕಟೇಶ್ ವರ್ಸೆ, ಕಾನೂನು ವೃತ್ತಿಯು ಕೇವಲ ವೃತ್ತಿಯಾಗದೆ, ಸಮಾಜದ ಮೇಲಿನ ಮಹತ್ತರ ಜವಾಬ್ದಾರಿಯನ್ನು ಹೊತ್ತಿರಬೇಕು ಎಂದು ಅಭಿಪ್ರಾಯಪಟ್ಟರು. ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ನೆಲಮಟ್ಟಕ್ಕೆ ತಲುಪಿಸುವಲ್ಲಿ ವಕೀಲರು ಹಾಗೂ ಸಮಾಜ ಸೇವಕರ ಪಾತ್ರ ಅತ್ಯಂತ ಮಹತ್ವದ್ದೆಂದು ಅವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಮಾಜಿ ಮೌಲ್ಯಮಾಪನ ಕುಲಸಚಿವರೂ ಹಾಗೂ ಕಾನೂನು ಪ್ರಾಧ್ಯಾಪಕರಾದ ಪ್ರೊ. ಡಾ.ಸತೀಶ್ ಗೌಡ ಮಾತನಾಡಿ, ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಕಾನೂನು ಅರಿವು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿದಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ದೇವಾಂಗ ಸಂಘ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿಲ್ಪಾ, ಲಯನ್ಸ್ ಇಂಟರ್‌ನ್ಯಾಷನಲ್ LCB ಸಂಭ್ರಮದ ಅಧ್ಯಕ್ಷೆ ಲಯನ್ ಡಾ.ಪದ್ಮಾಕ್ಷಿ ಲೋಕೇಶ್, ಆಲ್ಮಾಸ್ ಲಾ ಕನ್ಸಲ್ಟೆನ್ಸಿಯ ಹಿರಿಯ ವಕೀಲರಾದ ಉಸ್ಮಾನ್ ಶೇಕ್, ಸಿಟಿ ಸಿವಿಲ್ ಕೋರ್ಟ್ ಘಟಕದ ಮಾಜಿ ಆಡಳಿತ ಮಂಡಳಿ ಸದಸ್ಯರೂ ಹಾಗೂ ಜಯಕರ್ನಾಟಕ ಲೀಗಲ್ ಸೆಲ್ ರಾಜ್ಯಾಧ್ಯಕ್ಷರಾದ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 60ಕ್ಕೂ ಹೆಚ್ಚು ಸಮಾಜ ಸೇವಕರು, 20 ಹಿರಿಯ ವಕೀಲರು ಹಾಗೂ 10 ಯುವ ವಕೀಲರನ್ನು ಸಮಾಜಮುಖಿ ಸೇವೆ ಮತ್ತು ಕಾನೂನು ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸಾಧನೆಗಾಗಿ ಗೌರವಿಸಲಾಯಿತು.
ನಟರಾಜು ಜಿ.ಎಲ್. ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ:



ಇದೇ ಸಂದರ್ಭದಲ್ಲಿ “ನಮ್ಮ ತುಮಕೂರು” ಡಿಜಿಟಲ್ ಸುದ್ದಿ ಮಾಧ್ಯಮದ ಪ್ರಧಾನ ಸಂಪಾದಕರಾದ ನಟರಾಜು ಜಿ.ಎಲ್. ಅವರಿಗೆ ಉದ್ಯೋಗ ಸೃಷ್ಟಿ, ಶಿಕ್ಷಣ ಹೋರಾಟ, ಸಮಾಜ ಸೇವೆ ಹಾಗೂ ಜನಪರ ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಗೊಲನ ಎಂಟರ್ ಪ್ರೈಸಸ್ ಎಂಬ ಮಾನವ ಸಂಪತ್ತು ಸರಬರಾಜು ಸಂಸ್ಥೆಯನ್ನು ಸ್ಥಾಪಿಸಿ, ಗುತ್ತಿಗೆ ಆಧಾರದಲ್ಲಿ ಉದ್ಯೋಗ ಒದಗಿಸುವ ಮೂಲಕ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಿರುವುದು ಅವರ ಪ್ರಮುಖ ಸಾಧನೆ ಎಂದು ಗಣ್ಯರು ಶ್ಲಾಘಿಸಿದರು.
ಇದಲ್ಲದೆ ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳು, ಸರ್ಕಾರಿ ನೆರವು ಹಾಗೂ ಶಿಕ್ಷಣ ಹಕ್ಕುಗಳು ಸಮರ್ಪಕವಾಗಿ ದೊರಕಬೇಕೆಂಬ ದೃಢ ನಿಲುವಿನೊಂದಿಗೆ ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಪರ ನಿರಂತರ ಹೋರಾಟ ನಡೆಸುತ್ತಿರುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾಳಜಿ ಫೌಂಡೇಷನ್ ಮೂಲಕ ಸಮಾಜ ಸೇವೆ:
ತುಮಕೂರು ಜಿಲ್ಲೆಯ ಜನಸಾಮಾನ್ಯರ ಹಿತ ಹಾಗೂ ಸಮಸಮಾಜದ ನಿರ್ಮಾಣದ ಗುರಿಯೊಂದಿಗೆ ಇತ್ತೀಚೆಗೆ ಸ್ಥಾಪಿಸಲಾದ ಕಾಳಜಿ ಫೌಂಡೇಷನ್ (ರಿ), ತುಮಕೂರು ಸಂಸ್ಥೆಯ ರಾಜ್ಯಾಧ್ಯಕ್ಷರಾಗಿ ನಟರಾಜು ಜಿ.ಎಲ್. ಅವರು ಸೇವೆ ಸಲ್ಲಿಸುತ್ತಿದ್ದು, ಅಲ್ಪಾವಧಿಯಲ್ಲೇ ಈ ಸಂಸ್ಥೆ ಜನಮನ್ನಣೆ ಪಡೆದು ಹಲವು ಸಮಾಜ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದೆ.
ಅಲ್ಲದೆ “ನಮ್ಮ ತುಮಕೂರು” ಡಿಜಿಟಲ್ ಸುದ್ದಿ ಮಾಧ್ಯಮದ ಮೂಲಕ ಜನಪರ ಹಾಗೂ ನಿಸ್ಪಕ್ಷಪಾತ ಪತ್ರಿಕೋದ್ಯಮ ನಡೆಸುತ್ತಿರುವ ಅವರು, ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘ (ರಿ), ಕರ್ನಾಟಕದ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟರಾಜು ಜಿ.ಎಲ್. ಅವರು, “ಈ ಗೌರವ ನನ್ನೊಬ್ಬನಿಗೆ ಸೀಮಿತವಲ್ಲ. ಸಮಾಜ ಸೇವೆ ಮತ್ತು ಜನಪರ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಗೌರವ ಇದು. ಮುಂದೆಯೂ ಜನಸಾಮಾನ್ಯರ ಧ್ವನಿಯಾಗಿ, ನ್ಯಾಯ ಮತ್ತು ಸತ್ಯದ ಪರ ಹೋರಾಟ ಮುಂದುವರಿಸುತ್ತೇನೆ” ಎಂದು ಹೇಳಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಗೌರವದ ಆಚರಣೆಯಷ್ಟೇ ಅಲ್ಲದೆ, ಸಮಾಜಮುಖಿ ಚಿಂತನೆ, ಕಾನೂನು ಜಾಗೃತಿ ಹಾಗೂ ಜನಪರ ಹೋರಾಟಗಳಿಗೆ ಹೊಸ ಪ್ರೇರಣೆಯ ವೇದಿಕೆಯಾಗಿತು.
ಈ ಮಹತ್ವದ ಸಮಾಜಮುಖಿ ಕಾರ್ಯಕ್ಕೆ ಲಯನ್ಸ್ ಇಂಟರ್ ನ್ಯಾಷನಲ್, ಬೆಂಗಳೂರು ಸಂಭ್ರಮ ಸಂಸ್ಥೆ ಸಹಯೋಗ ನೀಡಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಶಕ್ತಿ ಮತ್ತು ಗೌರವ ತಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


