ಕೊರಟಗೆರೆ : ಮಕ್ಕಳಿಗಾಗಿ ಪೋಷಕರು ಹಣ ಸಂಪಾದಿಸುವುದಕ್ಕಿಂತ, ಸರಿಯಾದ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಹೊರ ವಲಯದಲ್ಲಿರುವ ಜೆ.ಕೆ. ಮೆಮೋರಿಯಲ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳನ್ನು ಧರ್ಮ ಮತ್ತು ಸಂಸ್ಕಾರದ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಪೋಷಕರು ಮತ್ತು ಶಾಲೆಗಳ ಮೇಲಿದೆ, ಆಟ-– ಪಾಠಗಳಿಂದ ವಂಚಿತ ಮಕ್ಕಳ ಜೀವನ ಶೂನ್ಯವಾಗುತ್ತದೆ. ಇಂದಿನ ಮಕ್ಕಳು ಅತ್ಯಂತ ಬುದ್ಧಿವಂತರು, ಅವರನ್ನು ಕೇವಲ ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಸುವುದಷ್ಟೇ ಅಲ್ಲ, ಸಂಸ್ಕಾರಯುತ ಶಿಕ್ಷಣ ನೀಡುವುದು ಕೂಡ ಅತ್ಯಾವಶ‍್ಯಕ ಎಂದು ಸಲಹೆಯಿತ್ತರು.
ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಂ ಮಾತನಾಡಿ, ಪ್ರಪಂಚದ ಅತ್ಯುತ್ತಮ ಗ್ರಂಥವೆಂದರೆ ಭಗವದ್ಗೀತೆ ಇದು ಮಕ್ಕಳಿಗೆ ಜೀವನದ ಅನುಭವಬೋಧನೆ ನೀಡುತ್ತದೆ, ಮಕ್ಕಳಲ್ಲಿ ಉತ್ತಮ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು, ಆರೋಗ್ಯವಂತ ಮಗುವಿನಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ, ಆದ್ದರಿಂದ ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದರು.
ಸಂಸ್ಥೆಯ ಅಧ್ಯಕ್ಷ ಡಾ.ಆರ್.ಮಲ್ಲಿಕಾರ್ಜುನ್ ಮಾತನಾಡಿ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಧ್ಯೇಯದಿಂದ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಲಾಗಿದೆ. ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರಭಾರತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಉಮಾಮಹೇಶ್ವರಿ, ಕಾರ್ಯದರ್ಶಿ ಡಾ. ಶೋಭಾ ಕೃಷ್ಣಮೂರ್ತಿ, ಸಹಕಾರ್ಯದರ್ಶಿ ನವೀನ್ ಕುಮಾರ್, ಖಜಾಂಚಿ ಆದಿ ರಮೇಶ್, ಸಲಹೆಗಾರರಾದ ಸುಧಾಮಣಿ, ಪ.ಪಂ ಸದಸ್ಯ ಕೆ.ಎನ್ ಲಕ್ಷ್ಮಿನಾರಾಯಣ್, ನಿವೃತ್ತ ಪ್ರಾಂಶುಪಾಲ ಕೆ.ಎಸ್ ಈರಣ್ಣ, ಪ್ರಾಂಶುಪಾಲ ಕೆ.ಸುಭಾಷ್, ಉಪ ಪ್ರಾಂಶುಪಾಲೆ ವಸುಂಧರ ಸೇರಿದಂತೆ ಇತರ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


