ಕೊರಟಗೆರೆ : ಉತ್ತಮ ಮತ್ತು ದಕ್ಷ ಆಡಳಿತದಿಂದ ತಾಲ್ಲೂಕು ಸರ್ವತೋಮುಖ ಪ್ರಗತಿ ಸಾಧ್ಯ ಎಂದು ತಹಶೀಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಗ್ರಾಮೀಣ ಮಾಹಿತಿ ತಂತ್ರಜ್ಞಾನ ಕೇಂದ್ರ ಗರುಗದೊಡ್ಡಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಉತ್ತಮ ಆಡಳಿತ ವಾರ’ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆಡಳಿತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದರು.
ಉತ್ತಮ ಆಡಳಿತದಿಂದ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಾಮಾಜಿಕ ಹಕ್ಕುಗಳೆಂದರೆ ಕೇವಲ ವಸತಿ, ಆಹಾರ ಮತ್ತು ಶಿಕ್ಷಣ ನೀಡುವುದಷ್ಟೇ ಅಲ್ಲ, ವೈಯಕ್ತಿಕ ಭದ್ರತೆ ನೀಡಿ, ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ತಳಮಟ್ಟದಿಂದ ಆಡಳಿತವನ್ನು ಬಲಪಡಿಸುವ ಮತ್ತು ಸಾಮಾನ್ಯ ಜನರಿಗೆ ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ‘ಸುಶಾಸನ ಸಪ್ತಾಹ ಅಭಿಯಾನ’ದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಪೌತಿ ಖಾತೆ ಮಾಡುವಲ್ಲಿ ಕೊರಟಗೆರೆ ತಾಲ್ಲೂಕು ರಾಜ್ಯದಲ್ಲಿಯೇ ೬ನೇ ಸ್ಥಾನದಲ್ಲಿದೆ. ಕಂದಾಯ ಇಲಾಖೆಯ ಸಿಬ್ಬಂದಿಗಳೂ ಸಹ ಪ್ರತಿದಿನ ಅಂದಿನ ಕೆಲಸ ಅಂದೇ ಮುಗಿಸುತ್ತಾರೆ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡದಂತೆ ಕೆಲಸ ಮಾಡಿಕೊಡಬೇಕೆಂದು ತಾಲ್ಲೂಕು ಮಟ್ಟದ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಗರುಗದೊಡ್ಡಿ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಕೇಂದ್ರದ ಅಧ್ಯಕ್ಷ ಜಿ.ವಿ.ವೀರೇಂದ್ರ ಪ್ರಸಾದ್ ಮಾತನಾಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಸುಶಾಸನ ಸಪ್ತಾಹ ಪ್ರಶಾಸನ ಗ್ರಾಮಗಳ ಕಡೆಗೆ ಎಂಬ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಈ ಸಪ್ತಾಹದ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರಿವು ಮೂಡಿಸಲು ಏರ್ಪಡಿಸಿರುವ ಕಾರ್ಯಾಗಾರವು ಆಡಳಿತವನ್ನು ಪರಿಣಾಮಕಾರಿಯಾಗಿ ತಲುಪಿಸಲು ತುಂಬಾ ಸಹಕಾರಿಯಾಗಿದೆ ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರ್ ಮಾತನಾಡಿ, ಅಧಿಕಾರಿಗಳು ಸಮಯ ಪ್ರಜ್ಞೆಯನ್ನು ಪಾಲಿಸಬೇಕು ಹಾಗೂ ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡದಿದ್ದರೆ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ವರ್ಷವಿಡೀ ಉತ್ತಮ ಆಡಳಿತ ವರ್ಷವೆಂದೇ ಅಧಿಕಾರಿಗಳು ತಿಳಿಯಬೇಕು ಎಂದರು.
ಗ್ರೇಡ್–2 ತಹಶೀಲ್ದಾರ್ ರಾಮದಾಸಪ್ಪ ಮಾತನಾಡಿ, ನಮ್ಮ ಇಲಾಖೆಯಲ್ಲಿ ಕೆಲವೊಮ್ಮೆ ಕಂಪ್ಯೂಟರ್ ಕೆಲಸ ತಾಂತ್ರಿಕದೋಷ, ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದೇ ವಿನಃ ಉದ್ದೇಶ ಪೂರಕವಾಗಿ ಯಾರಿಗೂ ತೊಂದರೆ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ತಿಳಿಸಿದರು.
ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸತ್ಯಪ್ಪ ಮಾತನಾಡಿ, ಕೊರಟಗೆರೆಯಲ್ಲಿ ತಹಸೀಲ್ದಾರ್ ಅತ್ಯುತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ತಹಶೀಲ್ದಾರ್ ಮಂಜುನಾಥ್ ಅವರನ್ನು ಗೌರವಿಸಲಾಯಿತು. ಕಾರ್ಯಾಗಾರದಲ್ಲಿ ಗರುಗದೊಡ್ಡಿ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಕೇಂದ್ರದ ಕಾರ್ಯದರ್ಶಿ ಜಿ.ವಿ. ನಾಗೇಂದ್ರ ಕುಮಾರ್, ನಿವೃತ್ತ ಶಿಕ್ಷಕ ಓ. ರಾಮಕೃಷ್ಣ, ರಾಮಾಂಜಿನೇಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಕಲ್ಕೆರೆ ಮಂಜುನಾಥ್, ಆನಂದ್ ಗುಂಡ, ಪರಿವರ್ತನ ಸಂಸ್ಥೆಯ ಶಿವಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


