ಕುಣಿಗಲ್: ಇಂದಿನ ರಾಜಕಾರಣವು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ಎತ್ತಿಕಟ್ಟುವಂತಹ ನೀಚ ಕೆಲಸ ಮಾಡಲಾಗುತ್ತಿದೆ, ಇದಕ್ಕೆ ಕುಮ್ಮಕ್ಕು ನೀಡಿದರೆ ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನ ಇನ್ನು ಹತ್ತು ವರ್ಷದಲ್ಲಿ ಇರುವುದಿಲ್ಲ ಎಂದು ಸಾಹಿತಿ ಚಾಣಗೆರೆ ವೆಂಕಟರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗ್ರಂಥಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್, ಪ್ರಥಮ ಪ್ರಧಾನಿ ನೆಹರು ಅವರು ದೇಶವು ಜಾತ್ಯತೀತ, ಧರ್ಮತೀತ ದೇಶವಾಗಬೇಕೆಂದು ಸಂವಿಧಾನ ಕೊಟ್ಟರು, ಡಾ. ಅಂಬೇಡ್ಕರ್ ಅವರು ಸಂವಿಧಾನ ನೀಡದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ, ಶೂದ್ರರು, ದಲಿತರು, ಶ್ರಮಿಕರು ಬದುಕಲು ಸಾಧ್ಯವಿರುತ್ತಿರಲಿಲ್ಲ. ಇಂದು ಮನುವಾದ, ಮನುಸ್ಮೃತಿಯನ್ನು ತಂದು ಆ ಜಾಗಕ್ಕೆ ಕೂರಿಸಲು ಪ್ರಯತ್ನಿಸಲಾಗುತ್ತಿದೆ, ಹಾಗೇನಾದರೂ ಆ ಪವಿತ್ರ ಸ್ಥಳಕ್ಕೆ ಮನುವಾದಿಗಳನ್ನು ಕೂರಿಸಿದ್ದೇ ಆದಲ್ಲಿ ಎರಡು ವರೆ ಸಾವಿರಗಳ ವರ್ಷದ ಹಿಂದಕ್ಕೆ ಹೋಗಲಿದ್ದೇವೆ ಎಂದು ಎಚ್ಚರಿಸಿದರು.
ಕನ್ನಡ ಉಳಿದಿರುವುದು ಹಳ್ಳಿಗಳಿಂದ: ಒಂದು ಕಾಲದಲ್ಲಿ ಕುಣಿಗಲ್ ಮತ್ತು ನಾಗಮಂಗಲ ತಾಲೂಕು ಎಂದರೇ ಬೆಂಗಳೂರಿನ ಜನ ತಾತ್ಸಾರದಿಂದ ಕಾಣುತ್ತಿದ್ದರು, ಆದರೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿದಿರುವುದು ಕುಣಿಗಲ್, ಮಾಗಡಿ, ಮದ್ದೂರು, ಮಂಡ್ಯ, ತುಮಕೂರು, ನಾಗಮಂಗಲ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಎಂದು ಹೇಳಿದರು.
ಜಿಲ್ಲಾ ನಿಯೋಜಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕರಿಗೌಡ ಬೀಚನಹಳ್ಳಿ ಮಾತನಾಡಿ, ಗ್ರಂಥಾಲಯಗಳಿಗೆ ದೇಶದಲ್ಲಿ ಬಹಳಷ್ಟು ಶಕ್ತಿ ಇದೆ, ಪ್ರಪಂಚವನ್ನು ಬೆಳಗಲು ಸೂರ್ಯ ಬೇಕು, ವ್ಯಕ್ತಿ ಬದುಕು ರೂಪಿಸಿಕೊಳ್ಳಲು ಪುಸ್ತಕಗಳು ಅವಶ್ಯಕ, ಈ ನಿಟ್ಟಿನಲ್ಲಿ ಈ ಹಿಂದೆ ವಿಶ್ವವಿದ್ಯಾಲಯ ಮತ್ತು ಗ್ರಂಥಾಲಯಗಳಲ್ಲಿ ಓದುವವರ ಸಂಖ್ಯೆ ದುಪ್ಪಟ್ಟಾಗಿತ್ತು ಆದರೆ ಈಗ ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿರುವ ಗ್ರಂಥಾಲಯಗಳು ಇಲ್ಲ, ಓದುವವ ಸಂಖ್ಯೆ ಸಹ ಇಳಿಮುಖವಾಗಿದೆ, ಈ ನಿಟ್ಟಿನಲ್ಲಿ ಕುಣಿಗಲ್ ಗ್ರಂಥಾಲಯ ಪ್ರಾರಂಭ ಮಾಡಿರುವುದು ಸಂತಸದ ವಿಚಾರವಾಗಿದೆ ಎಂದರು.
ಮಾಜಿ ಸಚಿವ ಡಿ. ನಾಗರಾಜಯ್ಯ ಮಾತನಾಡಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಸಾಪ ಕಟ್ಟಡದ ನೆಲ ಅಂತಸ್ತಿನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಿದೆ, ಈಗ ಮೇಲಂತಸ್ತಿನ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಸಾಹಿತಿ ನಾರಾಯಣ ಹೊಡಾಘಟ್ಟ, ಲೇಖಕ ಸೊಂದಲಗೆರೆ ಲಕ್ಷ್ಮೀಪತಿ, ವೆಗೊಲ ಇಂಡಿಯಾ ಪ್ರೈ.ಲಿ ಪ್ರಧಾನ ವ್ಯವಸ್ಥಾಪಕ ಜಗದೀಶ್ ಟಿ. ನಾಯಕ್ ಮಾತನಾಡಿದರು. ಈ ವೇಳೆ ಲೇಖಕ ಕೆ. ಚಂದ್ರಕೃಷ್ಣಪ್ಪ ಅವರ ವಿಚಾರ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು, ಲೇಖಕಿ ವೈ. ಜಿ. ವೆಂಕಟೇಶಮ್ಮ ಅವರಿಗೆ ಮಲ್ಲಮ್ಮ ಪಾಟೀಲ್ ನಾರಸೀಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ: ನಿಕಟ ಪೂರ್ವ ಅಧ್ಯಕ್ಷರಾದ ತಗಡೂರು ವೀರಭದ್ರಪ್ಪ, ಜಿ. ಬಿ. ಮಲ್ಲಪ್ಪ, ಕೆ. ಹೆಚ್. ವೆಂಕಟೇಶ್, ಗಾಯಿತ್ರಿ ರಾಜು, ದಿನೇಶ್ ಕುಮಾರ್, ಮತ್ತು ವೃತ್ತ ನಿರೀಕ್ಷಕ ಪ್ರಮೋದ್ ಗೌಡ, ಪ್ರಗತಿ ಹೆಚ್. ಆರ್. ಸರ್ವಿಸ್ ಪ್ರೈ. ಲಿ ಮಾಲೀಕ ನೀಲತ್ತಹಳ್ಳಿ ಜಿ. ರವಿಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಸಿ. ಶಿವಣ್ಣ, ನಿವೃತ್ತ ಉಪನ್ಯಾಸಕ ವಿನಾಯಕಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧಲಿಂಗಸ್ವಾಮಿ, ಜಯರಾಮಯ್ಯ, ಕೋಶಾಧ್ಯಕ್ಷ ವಿ. ಎನ್. ರಾಮಣ್ಣ, ನಿರ್ದೇಶಕರಾದ ಕೆ. ಎಲ್. ಬೋರೇಗೌಡ, ಕೆ. ಆರ್. ರಂಗನಾಥ್, ದಲಿತ್ ನಾರಾಯಣ್, ಕೆ. ಎನ್. ಲೋಕೇಶ್, ಜೀವಂದರ್ ಕುಮಾರ್, ಉಮೇಶ್, ಪ್ರಸಾದ್ ನಿಡಸಾಲೆ, ಲೀಲಾವತಿ, ಪರೀಫ್ ಉಲ್ಲಾ, ಎಂ. ಡಿ. ಮೋಹನ್, ಹೋಬಳಿ ಅಧ್ಯಕ್ಷರಾದ ಶಿವಕುಮಾರಸ್ವಾಮಿ, ಲಕ್ಷ್ಮೀನಾರಾಯಣ್ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


