ತುಮಕೂರು: ಅತಿ ವೇಗವಾಗಿ ಬಂದಿರುವ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಬೈಪಾಸ್ ರಸ್ತೆಯ ಸರ್ವೀಸ್ ರಸ್ತೆಗೆ ನುಗ್ಗಿ ರಸ್ತೆ ಬದಿಯಲ್ಲಿದ್ದ3 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಗಂಗಸಂದ್ರ ಸಿಗ್ನಲ್ ನಲ್ಲಿ ನಡೆದಿದೆ.
ಗುಬ್ಬಿ ಗೇಟ್ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಅತಿ ವೇಗವಾಗಿ ಬಂದಿರುವ ಪೋರ್ಸ್ ಒನ್ ಕಾರು ನಿಂತಿದ್ದ ಮತ್ತೊಂದು ಕಾರಿಗೆ ಅಪ್ಪಳಿಸಿದೆ. ನಂತರ ವೇಗವಾಗಿಯೇ ಸರ್ವೀಸ್ ರಸ್ತೆಗೆ ನುಗ್ಗಿ ರಸ್ತೆಬದಿಯಲ್ಲಿದ್ದ ಮೂರು ವಿದ್ಯುತ್ ಕಂಬಗಳಿಗೂ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಮುದ್ದಿವೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಯಾರೂ ಓಡಾಡದಿದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
ವಿದ್ಯುತ್ ಕಂಬಗಳಿಗೆ ಗುದ್ದಿದ ಕಾರಿನಲ್ಲಿ4 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ಚಾಲಕ ಮತ್ತಿಬ್ಬರಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಕಾರು ಅಪ್ಪಳಿಸಿದ ಮತ್ತೊಂದು ಕಾರಿನಲ್ಲಿದ್ದವರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ವೇಳೆ ಗುಬ್ಬಿಗೇಟ್ ಕಡೆಯಿಂದ ಕಾರು ವೇಗವಾಗಿ ಬಂದ ಸಂದರ್ಭದಲ್ಲಿ ಗಂಗಸಂದ್ರ ಸಿಗ್ನಲ್‌ನಲ್ಲಿ ಮತ್ತು ಸರ್ವೀಸ್ ರಸ್ತೆಯಲ್ಲಿ ಯಾರಾದರೂ ಬೈಕ್ ಸವಾರರು, ಪಾದಚಾರಿಗಳು ಇದ್ದಿದ್ದರೆ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಉಂಟಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಿಂಗ್ ರಸ್ತೆಯ ಗಂಗಸಂದ್ರ ಸಿಗ್ನಲ್ ಬಳಿ ಗುಬ್ಬಿಗೇಟ್ ಕಡೆಯಿಂದ ಬರುವ ರಸ್ತೆ ಹಾಗೂ ಮರಳೂರು ಸರ್ಕಲ್‌ನಲ್ಲಿ ಬರುವ ರಸ್ತೆ ಎರಡೂ ಕಡೆಯೂ ರಸ್ತೆ ಉಬ್ಬುಗಳನ್ನು ಹಾಕಬೇಕು ಎಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


