ತುಮಕೂರು: ಗೆಲುವು ಹವ್ಯಾಸವಾಗಬೇಕು, ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಶನಿವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು, ಒಂದು ಕೆಲಸವನ್ನು ಹೇಗೆ ಬೇಕಾದರೂ ಮಾಡಿ ಮುಗಿಸಬಹುದು. ಆದರೆ ಅದನ್ನು ಹೀಗೆ ಮಾಡಿ ಮುಗಿಸಬೇಕು ಎಂದು ತಿಳಿದು ಮುಗಿಸುವುದು ಮುಖ್ಯ. ಅಂತಹ ಚಾಣಾಕ್ಷತನ, ಬುದ್ಧಿವಂತಿಕೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅವಕಾಶಗಳಿಗಾಗಿ ಕಾಯಬಾರದು ಸಿಗುವ ಸಣ್ಣ ಅವಕಾಶವನ್ನೂ ಬಿಡದೆ ಬಳಸಿಕೊಂಡು ಯಶಸ್ವಿಯಾದರೆ ದೊಡ್ಡ ಅವಕಾಶಗಳಿಗೆ ನಾಂದಿಯಾಗುತ್ತದೆ. ಈಗ ನಿಮ್ಮ ಮುಂದಿನ ಗುರಿ ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯುವುದು. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು. ಅಂತಹ ಫಲಿತಾಂಶ ಪಡೆದರೆ ಶಾಲೆಯಲ್ಲಿ ಮತ್ತೊಂದು ಕಾರ್ಯಕ್ರಮ ಮಾಡೋಣ ಎಂದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್ ಗೌಡ, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಓದಿದ ಈ ನಾಗವಲ್ಲಿ ಶಾಲೆಯನ್ನು ತಾವು ಹತ್ತು ವರ್ಷಗಳ ಹಿಂದೆಯೇ ದತ್ತು ಪಡೆದಿದ್ದು ದೇಶದಲ್ಲೇ ಮಾದರಿ ಶಾಲೆಯನ್ನಾಗಿ ರೂಪಿಸುವ ಸಂಕಲ್ಪ ಮಾಡಿದ್ದೇವೆ. ಈ ಶಾಲೆಗೆ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಶಾಲೆ ಎಂಬ ಪ್ರತಿಷ್ಠಿತ ಗೋವಿಂದೇಗೌಡ ಶಿಕ್ಷಣ ಪ್ರಶಸ್ತಿ ದೊರಕಿದೆ ಎಂದು ಹೇಳಿದರು.
1951ರಲ್ಲಿ ಆಗಿನ ಮೈಸೂರು ಮಹಾರಾಜರು ಈ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆಗಿನ ಈ ಭಾಗದ ಶಾಸಕ ಮುಡಲಗಿರಿಯಪ್ಪನವರು ಶಾಲೆಗೆ ಜಮೀನು ನೀಡಿದರು. ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡರು, ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಶಾಲೆಯ ಚಟುವಟಿಕೆ ಮೆಚ್ಚಿದ್ದಾರೆ. ಮುಂದಿನ ವರ್ಷ ಶಾಲೆಗೆ 75 ವರ್ಷ ತುಂಬುತ್ತದೆ. ದುರಸ್ತಿ ಕಾರ್ಯ ಮುಗಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಿ ನಾಗವಲ್ಲಿ ಶಾಲೆಯನ್ನು ದೇಶದಲ್ಲೇ ಅತ್ಯುತ್ತಮ ಶಾಲೆ ಮಾಡುವ ಆಶಯ ವ್ಯಕ್ತಪಡಿಸಿದರು.
ಶಾಲೆಯ ಎನ್‌ಸಿಸಿ ಮಕ್ಕಳು ಮಾರ್ಚ್‌ಫಾಸ್ಟ್ ಮೂಲಕ ಶಾಸಕರು, ಜಿಲ್ಲಾಧಿಕಾರಿಗಳನ್ನು ಸಮಾರಂಭಕ್ಕೆ ಬರಮಾಡಿಕೊಂಡರು. ಈ ವೇಳೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಶಾಲೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಡಿಪಿಐ ರಘುಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಕಾಲೇಜಿನ ಪ್ರಾಚಾರ್ಯ ಸಿದ್ದರಾಜು, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷೆ ಜ್ಯೋತಿ, ಡಯಟ್ ಉಪನ್ಯಾಸಕಿ ಶೈಲಾಜಕುಮಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಮಿತ್ರಮ್ಮ, ಸದಸ್ಯರಾದ ರುಕ್ಕಿಣಮ್ಮ, ವೆಂಕಟಲಕ್ಷ್ಮಮ್ಮ, ಹೊಳಕಲ್ ಗ್ರಾ.ಪಂ. ಅಧ್ಯಕ್ಷ ಹೆಚ್.ಎ.ಅಂಜನಪ್ಪ ಅವರೊಂದಿಗೆ ವಿವಿಧ ಮುಖಂಡರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


