ತುರುವೇಕೆರೆ: ದೇಶ ಮತ್ತು ರಾಜ್ಯ ಕಂಡ ಧೈರ್ಯವಂತ, ಪ್ರಾಮಾಣಿಕ ಹಾಗೂ ದಕ್ಷ IPS ಅಧಿಕಾರಿಗಳಲ್ಲಿ ಒಬ್ಬರಾದ ದಿ.ಡಾ.ಕೆ.ಮಧುಕರ್ ಶೆಟ್ಟಿ ಅವರ ಪುಣ್ಯತಿಥಿಯ ಅಂಗವಾಗಿ, ತುರುವೇಕೆರೆ ಪೊಲೀಸ್ ಠಾಣೆಗೆ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ, ಅವರನ್ನು ಪೊಲೀಸ್ ಇಲಾಖೆಗೆ ಆದರ್ಶಪ್ರಾಯ ವ್ಯಕ್ತಿಯಾಗಿ ಸ್ಥಾಪಿಸುವ ಹಾಗೂ ಪೊಲೀಸರಲ್ಲಿ ಕರ್ತವ್ಯಪ್ರಜ್ಞೆ ಮತ್ತು ನೈತಿಕತೆ ಬಲಪಡಿಸುವ ಉದ್ದೇಶದ ಅಭಿಯಾನವನ್ನು ಕೆ ಆರ್ ಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ರವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ KRS ಪಕ್ಷದ ಕಾರ್ಯಕರ್ತರು ಕೈಗೊಂಡಿದ್ದು, ರಾಜ್ಯದ ಪೊಲೀಸ್ ಸಿಬ್ಬಂದಿಯಲ್ಲಿ ಜಾಗೃತಿ ಮತ್ತು ಸ್ಪೂರ್ತಿ ಮೂಡಿಸುವ ಪ್ರಯತ್ನವಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿರುವುದು, ಕೆಲವೆಡೆ ಪೊಲೀಸರೇ ಅಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಹಾಗೂ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಅತ್ಯಂತ ದುರಾದೃಷ್ಟಕರ ಮತ್ತು ಶೋಚನೀಯ ಸಂಗತಿಯಾಗಿದ್ದು, ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ, ಡಾ. ಮಧುಕರ್ ಶೆಟ್ಟಿ ಅವರಂತಹ ಧೈರ್ಯವಂತ, ಪ್ರಾಮಾಣಿಕ ಹಾಗೂ ದಕ್ಷ IPS ಅಧಿಕಾರಿಗಳನ್ನು ಆದರ್ಶವಾಗಿ ಇಟ್ಟುಕೊಂಡು, ರಾಜ್ಯ ಮತ್ತು ದೇಶದ ಜನಸಾಮಾನ್ಯರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮನವಿ ಪತ್ರಗಳನ್ನು ಸಲ್ಲಿಸುವ ಮೂಲಕ ಪೊಲೀಸ್ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು KRS ಪಕ್ಷದ ವತಿಯಿಂದ ಕೈಗೊಂಡಿದೆ.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ತುರುವೇಕೆರೆ ತಾಲೂಕು ಪದಾಧಿಕಾರಿಗಳಾದ ಅರುಣ್ ಕುಮಾರ್, ಪುನೀತ್, ಶಿವಪ್ಪ, ಚಿದಾನಂದ ಮೂರ್ತಿ, ನಾಗೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ.ಎ. ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


