ಚಿಕ್ಕೋಡಿ: ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರದ ಕನಸು ಕಂಡಿದ್ದ ದಂಪತಿಯ ಜೀವನದಲ್ಲಿ ಕೌಟುಂಬಿಕ ಕಲಹ ವಿಧಿಯಾಟವಾಡಿದೆ. ಪತ್ನಿ ನೇಣಿಗೆ ಶರಣಾದ ಬೆನ್ನಲ್ಲೇ, ಆಘಾತಕ್ಕೊಳಗಾದ ಪತಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ನಾಗರಾಳ ಗ್ರಾಮದ ಉಮಾಶ್ರೀ (24) ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ಹಿಂದೆ ಲಗಮಣ್ಣ ಹೆಗ್ಗನ್ನವರ್ (27) ಎಂಬುವವರನ್ನು ಉಮಾಶ್ರೀ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ಸಂಬಂಧಿಕರಾಗಿದ್ದರಿಂದ ಮನೆಯವರು ಒಪ್ಪಿಗೆ ನೀಡಿ ವಿವಾಹ ಮಾಡಿಕೊಟ್ಟಿದ್ದರು. ಆದರೆ, ಇತ್ತೀಚಿನ ಕೆಲವು ದಿನಗಳಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು ಎನ್ನಲಾಗಿದೆ.
ಪತ್ನಿಯ ಸಾವಿನ ಬೆನ್ನಲ್ಲೇ ಪತಿಯ ಆತ್ಮಹತ್ಯೆ ಯತ್ನ: ಸೋಮವಾರ ರಾತ್ರಿ ಉಮಾಶ್ರೀ ನೇಣು ಹಾಕಿಕೊಂಡಿರುವುದನ್ನು ಕಂಡ ಪತಿ ಲಗಮಣ್ಣ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪತ್ನಿಯ ಸಾವು ನೋಡಿ ನೊಂದ ಅವರು ಕೂಡ ತಕ್ಷಣವೇ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ಲಗಮಣ್ಣ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಂಬಂಧಿಕರ ಹೇಳಿಕೆ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಬಂಧಿ ಸತ್ಯಪ್ಪ ಅವರು, “ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು ಮತ್ತು ಚೆನ್ನಾಗಿಯೇ ಇದ್ದರು. ಆದರೆ ಮೊದಲು ಉಮಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವು ಕಂಡು ಲಗಮಣ್ಣ ವಿಷ ಸೇವಿಸಿದ್ದಾನೆ. ಈ ಘಟನೆಗೆ ನಿಖರ ಕಾರಣ ಏನೆಂದು ನಮಗೆ ತಿಳಿದಿಲ್ಲ” ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


