ತುಮಕೂರು: ನಗರದ ಅಮಾನಿಕೇರೆ ಗಜಾನನ ಮಂಟಪದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಸಂಜೆ ವಿದ್ಯುಕ್ತ ತೆರೆಬಿದ್ದಿತು. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕರಿಗೌಡ ಬೀಚನಹಳ್ಳಿ ದಂಪತಿಗೆ ಗೌರವ ಸನ್ಮಾನದೊಂದಿಗೆ ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳನ್ನು ಬಲಪಡಿಸುವ ಕ್ರಮಕೈಗೊಳ್ಳುವುದು ಸೇರಿದಂತೆ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, ಈಗಿನ ಮಕ್ಕಳು ಮೊಬೈಲ್ ಬಳಕೆಯಿಂದ ಕೇವಲ ತಾಂತ್ರಿಕ ಜ್ಞಾನದ ಅರಿವು ಪಡೆಯುತ್ತಿದ್ದಾರೆಯೇ ವಿನಃ ಮಾನವೀಯ ಸಂಬಂಧ ಹಾಗೂ ನೈತಿಕ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಬಿಡಿಸಿ ಪುಸ್ತಕ, ಸಾಹಿತ್ಯ ಓದಿನ ಅಭಿರುಚಿ ಬೆಳೆಸಬೇಕು. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಓದು ಅನಿವಾರ್ಯ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರೆ ಭಾಷೆಯ ಉಳಿವು ಸಾಧ್ಯ ಎಂದರು.
ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕ್ಕಪಕ್ಕದವರನ್ನು ಪರಿಚಯ ಮಾಡಿಕೊಂಡು ಅನುಭವಗಳನ್ನು ಹಂಚಿಕೊಳ್ಳುವ ಸಂಸ್ಕೃತಿ ಇತ್ತು. ಆದರೆ ಇಂದು ಬಸ್ ಪ್ರಯಾಣಿಕರೆಲ್ಲರೂ ಮೊಬೈಲ್‌ನಲ್ಲಿ ಮುಳುಗಿಹೋಗಿರುತ್ತಾರೆ. ಇದು ಮಾನಸಿಕ ಮತ್ತು ಸಾಮಾಜಿಕ ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ಇಂದು ಸಾಹಿತ್ಯ, ದಿನಪತ್ರಿಕೆ ಓದುಗರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಸಂಪಾದಕೀಯ ಪುಟದಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿದರೆ ನಮ್ಮ ಜ್ಞಾನಾರ್ಜನೆ ವಿಸ್ತಾರಗೊಳ್ಳುತ್ತದೆ. ಆದರೆ ಇದನ್ನು ಯುವ ಪೀಳಿಗೆ ಅರ್ಥೈಸಿಕೊಳ್ಳದೆ ಮೊಬೈಲ್ ಸಾಕು ಎನ್ನುವ ಗೀಳಿಗೆ ಬಿದ್ದಿದ್ದಾರೆ ಎಂದು ಹೇಳಿದರು.
ಕನ್ನಡ ಶಾಲೆಗಳು ಪೋಷಕರಿಂದಲೇ ಅವನತಿ: ನಿಶ್ಚಲಾನಂದ ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ಶ್ರೀ ನಿಶ್ಚಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ, ಸಿಎಂ ಮುಚ್ಚುತ್ತಿಲ್ಲ. ಎಷ್ಟೋ ವಿದ್ಯಾರ್ಥಿಗಳು ಬಂದರೂ ಅವರನ್ನು ದಾಖಲಿಸಿಕೊಂಡು ಉತ್ತಮ ಬೋಧನೆ ಮಾಡುವಷ್ಟು ಸಾಮರ್ಥ್ಯ ಹೊಂದಿವೆ. ಆದರೆ ಕನ್ನಡ ಶಾಲೆಗಳು ಪೋಷಕರ ನಿರ್ಲಕ್ಷ್ಯ, ಉಪೇಕ್ಷೆಯಿಂದಲೇ ಅವನತಿಯ ಹಾದಿ ಹಿಡಿಯುತ್ತಿವೆ. ಕನಿಷ್ಠ 5ನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಓದುವುದನ್ನು ಕಡ್ಡಾಯಗೊಳಿಸಬೇಕು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಲ್ಲಿ ಜನಪದ ಸಂಗ್ರಹಾಲಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದನ್ನು ವೇದಿಕೆಯಲ್ಲೇ ಮರೆತು ಬರಬಾರದು. ತುಮಕೂರು ಜಿಲ್ಲೆ ನೂತನ ಕ್ಯಾಂಪಸ್‌ಗಳಲ್ಲಿ ಮಾಡಿಸಿ ಬೆಳವಣಿಗೆಗೆ ಆದ್ಯತೆ ನೀಡುವುದು ಉತ್ತಮ. ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರಿಗೆ ಪೂರಕವಾಗಿ ತುಮಕೂರು ವಿವಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಅಗತ್ಯವಿದೆ ಎಂದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು:
- ವಿದ್ಯಾರ್ಥಿಗಳ ಕೊರತೆಯಿಂದ ನಡೆಯುತ್ತಿರುವ ಕನ್ನಡ ಶಾಲೆಗಳನ್ನು ಮುಚ್ಚದೆ, ಅವುಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು.
- ತುಮಕೂರು ಜಿಲ್ಲೆ ಜಾನಪದ ಕಣಜ ಎಂದೇ ಪ್ರಸಿದ್ಧಿಯಾಗಿದೆ. ಜಿಲ್ಲೆಯಲ್ಲಿ ಅಳಿದುಳಿದ ಜಾನಪದ ವಸ್ತುಗಳನ್ನು ಸಂಗ್ರಹಿಸಿ ತುಮಕೂರು ಬಳಿ ಜಾನಪದ ಲೋಕ ಮಾದರಿ ಸಂಗ್ರಹಾಲಯ ನಿರ್ಮಾಣವಾಗಬೇಕು. ಮತ್ತು ತುಮಕೂರು ಬಳಿ ಕಲಾಗ್ರಾಮದ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಬೇಕು.
- ಕರ್ನಾಟಕ ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆ ಆಯಾ ವರ್ಷ ಪ್ರಕಟವಾಗುವ ಪುಸ್ತಕಗಳನ್ನು ಆಯಾ ವರ್ಷವೇ ಖರೀದಿಸಿ ಲೇಖಕರಿಗೆ, ಪ್ರಕಾಶಕರಿಗೆ ಹಣ ಬಿಡುಗಡೆ ಮಾಡುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು.
- ತುಮಕೂರು ಜಿಲ್ಲೆ ಕೋಟೆ ಕೊತ್ತಲಗಳ ನಾಡು, ಸ್ಮಾರಕಗಳ ಬೀಡಾಗಿದ್ದು, ಈ ಸ್ಮಾರಕಗಳ ರಕ್ಷಣೆ ಮಾಡಬೇಕು. ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಮೂರ್ತಿಶಿಲ್ಪ, ಸ್ಮಾರಕ ಶಿಲ್ಪಗಳನ್ನು ಒಂದೆಡೆ ಸಂಗ್ರಹಿಸಿ ವಸ್ತು ಸಂಗ್ರಹಾಲಯ ನಿರ್ಮಿಸಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


