ತುಮಕೂರು: ರಾಜ್ಯದಲ್ಲಿ 21 ರೀತಿಯ ನ್ಯೂನತೆಯುಳ್ಳ 11,45,208 ಜನ ವಿಕಲಚೇತನರಿದ್ದರೆ, ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ. ಎಲ್ಲವೂ ಸರಿಯಾಗಿರುವ ನಾವು ವಿಕಲಚೇತನರನ್ನು ಅವರ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ಧರಾಮಣ್ಣ ಕೆ. ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೊಬಿಲಿಟಿ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕಾಯ್ದೆ ಅರಿವು ಮತ್ತು ಸೌಲಭ್ಯ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಎಲ್ಲವೂ ಕಾನೂನಿನಿಂದಲೇ ಪರಿಹಾರವಾಗುವುದಿಲ್ಲ. ಮಹಿಳೆಯರು, ಮಕ್ಕಳು, ವಿಕಲಚೇತನರು ಇವರೆಲ್ಲರಿಗೂ ವಿಶೇಷ ಕಾನೂನುಗಳಿವೆ. ಆದರೆ ಅದರ ಅನುಷ್ಠಾನ ಮುಖ್ಯವಾಗಿದೆ ಎಂದರು.
ಶೇ. 90 ಕ್ಕಿಂತಲೂ ಹೆಚ್ಚು ಅಂಗವೈಕಲ್ಯ ಹೊಂದಿರುವ ಪೋಷಕರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ವಿಕಲಚೇತನರ ಪುನರ್ವಸತಿಗಾಗಿ 222 ಜನ ವಿಆರ್‌ಡಬ್ಲ್ಯೂ, 8 ಜನ ಎಂ.ಆರ್.ಡಬ್ಲ್ಯೂ, 18 ಜನ ಯುಆರ್‌ಡಬ್ಲ್ಯೂಗಳು, 7 ವಿವಿಧ ಸಂಘ ಸಂಸ್ಥೆಗಳು ಸರ್ಕಾರದ ಅನುದಾನ ಪಡೆದು ಕೆಲಸ ಮಾಡುತ್ತಿದ್ದಾರೆ. ಎಂ.ಎಸ್.ಡಬ್ಲ್ಯೂ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂತಹ ವಿಭಾಗಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಸಾಮಾಜಿಕ ಪಿಡುಗುಗಳ ನಿವಾರಣೆಯತ್ತ ವಿಶೇಷ ಗಮನಹರಿಸಬೇಕಾಗಿದೆ. ಮುಟ್ಟು ಮತ್ತು ಹೆರಿಗೆ ಸಂದರ್ಭದಲ್ಲಿ ಪಾಲಿಸುವ ಹಳೆಯ ಸಂಪ್ರದಾಯವನ್ನು ತೊಲಗಿಸಲು ಹೋರಾಡ ಬೇಕಿದೆ. ವಿಶೇಷ ಶಿಬಿರಗಳ ಮೂಲಕ ಆ ಜನರಿಗೆ ತಿಳಿವಳಿಕೆ ಮೂಡಿಸಲು ಪ್ರಯತ್ನಿಸಬೇಕೆಂದರು.
ಮೊಬಿಲಿಟಿ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯಕಾರಿ ನಿರ್ದೇಶಕರಾದ ಅಲ್ಬಿನಾ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನರ ಬಗ್ಗೆ ಅನುಕಂಪಕ್ಕಿಂತ, ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕುಟುಂಬ, ಸಮಾಜ ಹಾಗೂ ಪ್ರಭುತ್ವದ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.
ಮೊಬಿಲಿಟಿ ಇಂಡಿಯಾ ಕಳೆದ 31 ವರ್ಷಗಳಿಂದ ವಿಕಲಚೇತನರಿಗಾಗಿ ದುಡಿಯುತ್ತಾ ಬಂದಿದೆ. ಈಶಾನ್ಯ ರಾಜ್ಯಗಳಲ್ಲದೆ ಕರ್ನಾಟಕದ ಚಾಮರಾಜನಗರ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿಯೂ ಮೊಬಿಲಿಟಿ ಇಂಡಿಯಾ ಕೆಲಸ ಮಾಡುತ್ತಿದೆ ಎಂದರು.
ಅಂಗವಿಕಲತೆ ಶಾಪ, ವರ ಎನ್ನುವವರ ನಡುವೆಯೂ ಸಾಧನೆ ಮಾಡಿದ ಅನೇಕ ವಿಕಲಚೇತನರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಅವರಿಗೆ ಕರುಣೆಗಿಂತ ಅವಕಾಶಗಳನ್ನು ಒದಗಿಸುವ ಕೆಲಸವನ್ನು ಮಾಡಿದಾಗ, ಅವರು ಸಹ ನಮ್ಮ ನಿಮ್ಮಂತೆಯೇ ಸಮಾಜದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ ಮಾತನಾಡಿ, ವಿಕಲಚೇತನರ ಬಗ್ಗೆ ಮೊದಲು ಕುಟುಂಬದ ಸದಸ್ಯರು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅದನ್ನು ಗುರುತಿಸಿ, ಸೂಕ್ತ ಪರಿಹಾರಕ್ಕೆ ಮುಂದಾದರೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯ. ನಮ್ಮ ಮನೆಗಳು ಮೊದಲು ವಿಕಲಚೇತನ ಸ್ನೇಹಿಯಾಗಬೇಕು. ವಯಸ್ಸಾದ ತಂದೆ, ತಾಯಿ, ಹಿರಿಯರು ಯಾವ ಅಡೆತಡೆಯಿಲ್ಲದೆ ಮನೆಯಲ್ಲಿ ಓಡಾಡುವಂತಹ ವಾತಾವರಣ ಸೃಷ್ಟಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಸ್ವಾನೊಬಿಲಿಟಿ ಇಂಡಿಯಾದ ತುಮಕೂರು ಜಿಲ್ಲಾ ಯೋಜನಾ ವ್ಯವಸ್ಥಾಪಕ ಆನಂದ್ ಎಸ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನರಿಗೆ ಇಲಾಖೆ ಯ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹಾಗೂ ಸಂಸ್ಥೆಯು ಭಾರತದ ಹಲವು ಕಡೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರಿಸಿದರು.
ಎಂ.ಆರ್.ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂ ಸಂಘಟನೆಯ ಜಿಲ್ಲಾಧ್ಯಕ್ಷ ಚಿತ್ತಯ್ಯ ಅವರು ವಿಕಲಚೇತನರಿಗಾಗಿ ಇರುವ ಯೋಜನೆಗಳ ಬಗ್ಗೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಾ.ಬಿ.ರಾಜಕುಮಾರ್ ಅವರು 1995ರ ಅಂಗವಿಕಲರ ಕಾಯ್ದೆ, 2006ರ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಮತ್ತು ಒಡಂಬಡಿಕೆ 2016ರ ವಿಕಲಚೇತನರ ಕಾಯ್ದೆ ಕುರಿತು ಮಾತನಾಡಿದರು. ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ.ಪರಶುರಾಮ ಕೆ.ಜಿ., ಉಪನ್ಯಾಸಕರುಗಳು, ಮೊಬಿಲಿಟಿ ಇಂಡಿಯಾದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿ ಪೂಜಾರಿ ಮಂಜುನಾಥ ಸಿ. ಕೆಂಗಲ್ ಹಟ್ಟಿ ಅವರು ಬರೆದಿರುವ ‘ಬವಣೆ’ ಎಂಬ ಕವನ ಸಂಕಲನವನ್ನು ಬಿಡುಗಡೆ ಗೊಳಿಸಲಾಯಿತು.
ವಿಕಲಚೇತನರನ್ನು ನೋಡಿಕೊಳ್ಳಲು ನುರಿತ ಸಮಾಜ ವಿಜ್ಞಾನಿಗಳ ಅಗತ್ಯವಿದೆ. ಇಂದು ಎಂ.ಎಸ್. ಡಬ್ಲ್ಯೂ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕೆಲವುರಾದರೂ ಜಿಲ್ಲೆಯ 46 ಸಾವಿರ ಕುಟುಂಬಗಳನ್ನು ಸೇರುವ ಪ್ರಯತ್ನ ನಡೆಸಿದರೆ ನೀವು ಕಲಿತದ್ದು ಸಾರ್ಥಕ. ವಿಕಲಚೇತನರನ್ನು ಒಪ್ಪಿಕೊಂಡು, ಅವರ ಸಬಲೀಕರಣ ವಾಗುವವರೆಗೂ ನಿರಂತರವಾಗಿ ತೊಡಗಿಕೊಳ್ಳುವುದು ಸವಾಲಿನ ಕೆಲಸ. ಸಮಸ್ಯೆಯನ್ನು ಗುರುತಿಸುವ ಕೆಲಸವಾಗುತ್ತದೆ. ಆದರೆ ಪರಿಹಾರ ಅದೇ ವೇಗದಲ್ಲಿ ನಡೆಯುತ್ತಿಲ್ಲ. ವಿಕಲಚೇತನರು ಮತ್ತು ಅವರ ಪೋಷಕರಿಗೆ ನಮ್ಮ ಸಹಾಯಕ್ಕೆ ನಿಲ್ಲುವವರು ಯಾರು ಎಂಬ ಪ್ರಶ್ನೆ ಹುಟ್ಟು ಹಾಕದಂತೆ ಕೆಲಸ ಮಾಡಬೇಕಾಗಿದೆ.
— ಪ್ರೊ. ಕೆ.ಜಿ. ಪರಶುರಾಮ, ಹಿರಿಯ ಪ್ರಾಧ್ಯಾಪಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


