ತುಮಕೂರು: ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಹೆಬ್ಬಾಗಿಲಿನಂತಿರುವ ತುಮಕೂರಿನಲ್ಲಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿನ ನೂತನ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಗ್ರಾಹಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ತುಮಕೂರನ್ನು ‘ಪ್ರಿಂಟಿಂಗ್ ಹಬ್’ ಆಗಿ ರೂಪಿಸಬೇಕೆಂದು ಸಮಾಲೋಚಕರಾದ ಸಿ.ಸಿ.ಪಾವಟೆ ಸಲಹೆ ನೀಡಿದರು.
ತುಮಕೂರು ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಏರ್ಪಡಿಸಿದ್ದ ‘ಮುದ್ರಣಕಾರರ ಕುಂದುಕೊರತೆಗಳ ಕುರಿತ ಸಮಾಲೋಚನಾ ಸಭೆ’ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿ ಮುದ್ರಣ ಉದ್ಯಮವು ತನ್ನ ವ್ಯಾಪ್ತಿ ಹಾಗೂ ಸಾಮರ್ಥ್ಯವನ್ನು ವಿಸ್ತರಿಸಲು ಅನುವು ಮಾಡಿದೆ. ಗ್ರಾಹಕರ ಬೇಡಿಕೆಗಳು ಮುದ್ರಣ ಉದ್ಯಮದಲ್ಲಿ ಅನೇಕ ಹೊಸ ಅವಕಾಶಗಳಿಗೆ ಅನುವು ಮಾಡಿಕೊಟ್ಟಿವೆ. ಸಾಂಪ್ರದಾಯಿಕ ಆಫ್ ಸೆಟ್‌ನಿಂದ ಡಿಜಿಟಲ್ ಮುದ್ರಣದವರೆಗೆ ಅನೇಕ ಬದಲಾವಣೆಗಳಾಗಿವೆ. ಇದಕ್ಕನುಗುಣವಾಗಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿ ದೈನಂದಿನ ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರತಿನಿತ್ಯ ಅಪ್ ಡೇಟ್ ಆಗಬೇಕೆಂದು ಅವರು, ನಿಮ್ಮ ವೃತ್ತಿಯಲ್ಲಿ ಪ್ರೀತಿ, ಭಕ್ತಿ, ವಿಶ್ವಾಸ, ಬದ್ಧತೆ ಹಾಗೂ ಶರಣಾಗತಿಯಿರಬೇಕು. ಅದೇ ರೀತಿ ದುಶ್ಚಟಗಳಿಂದ ದೂರವಿರಬೇಕು ಎಂದು ಹಲವು ನಿದರ್ಶನಗಳೊಂದಿಗೆ ವಿವರಿಸಿದರು.
ಮುದ್ರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಸುಲಭವಾಗಿ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಸ್ಥಳೀಯವಾಗಿಯೇ ದೊರೆಯುವಂತೆ ಮಾಡಬೇಕು. ಇದರಿಂದ ಅನಗತ್ಯ ವೆಚ್ಚ, ಸಮಯ ಉಳಿತಾಯವಾಗುತ್ತದೆ. ಇದಕ್ಕೆ ಮುದ್ರಣಕಾರರಿಗೆ ಸಂಘಟನೆ ಅತ್ಯಗತ್ಯವಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಸಹಕಾರ ಸಂಘಗಳ ಸ್ಥಾಪನೆ, ಮನೆ-ನಿವೇಶನಗಳ ನಿರ್ಮಾಣ, ವಿಮಾ ಸೌಲಭ್ಯ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವುದು — ಹೀಗೆ ಹಲವಾರು ಸವಲತ್ತುಗಳನ್ನು ಪಡೆಯಬಹುದಾಗಿದೆ. ಆದರೆ ಇದಕ್ಕೆಲ್ಲಾ ಸಂಘಟನೆ ಅನಿವಾರ್ಯವಾಗಿದ್ದು, ಮುದ್ರಣಕಾರರು ತಮ್ಮಲ್ಲಿನ ವೈಯಕ್ತಿಕ ವೈಮನಸ್ಸುಗಳನ್ನು ಬದಿಗಿಟ್ಟು ಒಂದಾಗಿ ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಸಿ.ಸಿ. ಪಾವಟೆ ಕರೆ ನೀಡಿದರು. ಮುದ್ರಣಕಾರರ ಸಂಘದ ಪದಾಧಿಕಾರಿಗಳು ಹಾಗೂ ನೂರಕ್ಕೂ ಹೆಚ್ಚಿನ ಮುದ್ರಣಕಾರರು ಈ ಸಭೆಯಲ್ಲಿ ಪಾಲ್ಗೊಂಡು ಮುದ್ರಣ ಕ್ಷೇತ್ರದಲ್ಲಿನ ಸಮಸ್ಯೆಗಳು, ಪರಿಹಾರ ಕುರಿತಂತೆ ಚರ್ಚಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


