ಶಿರಾ: ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಇರಬಾರದು. ಪಕ್ಷಾತೀತವಾಗಿ ಅಭಿವೃದ್ಧಿ ಆಗಬೇಕು. ಶಾಸಕರಿಗೆ ಇರುವಷ್ಟು ಅಧಿಕಾರ ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದೆ. ಈ ನಿಟ್ಟಿನಲ್ಲಿ ಗ್ರಾಮಸಭೆಗಳನ್ನು ಪಂಚಾಯಿತಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಗ್ರಾಮ ಪಂಚಾಯ್ತಿಗಳೇ ಗ್ರಾಮಗಳ ಸರ್ಕಾರವಾಗಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಡಾ. ಟಿ.ಬಿ.ಜಯಚಂದ್ರ ಹೇಳಿದರು.
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹುಯಿಲ್‌ದೊರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಎಸ್ ರಂಗನಹಳ್ಳಿ, ದೇವಿ ತಾಂಡ ಗ್ರಾಮಗಳ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹೆಚ್ಚು ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದುವರೆಗೂ ಸುಮಾರು 17 ಗ್ರಾಪಂ ನೂತನ ಕಟ್ಟಡಗಳು ಪೂರ್ಣಗೊಂಡಿವೆ. ಇದು ರಾಜ್ಯದಲ್ಲಿಯೇ ಮಾದರಿ ಕೆಲಸವಾಗಿದ್ದು, ನೂತನ ಪಂಚಾಯಿತಿ ಕಟ್ಟಡಗಳಿಗೆ ಸರ್ಕಾರದಿಂದ 25 ಲಕ್ಷ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಇರುವಂತಾಗಬೇಕು. ಗ್ರಾಮ ಪಂಚಾಯಿತಿ ಕೆಲಸ ಹಾಗೂ ಕಂದಾಯ ಇಲಾಖೆಯ ಕೆಲಸಗಳು ಒಟ್ಟಿಗೆ ಸಿಗುವಂತಾದಾಗ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಗ್ರಾಮೀಣ ಪ್ರದೇಶದ ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಪಂಚದಲ್ಲಿಯೇ ಮಾದರಿಯಾದ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದು ಗ್ರಾಮಗಳಲ್ಲಿ 100 ದಿನಗಳ ಉದ್ಯೋಗ ಖಾತರಿ ನೀಡಿದ್ದರು. ಆದರೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಾಯಿಸಲು ಮುಂದಾಗಿದೆ. ನರೇಗಾ ಯೋಜನೆಯ ಹೆಸರು ಬದಲಾಯಿಸಿ ಸಂತೋಷ ಆದರೆ ಆ ಯೋಜನೆಯ ಶಕ್ತಿ ಕುಂದಿಸಬೇಡಿ ಎಂದು ಜಯಚಂದ್ರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ ಸುರೇಶ್‌ಬಾಬು ಮಾತನಾಡಿ ಗ್ರಾಪಂ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಬೇಕು. ಜನರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಂಡರೆ ಸಮಸ್ಯೆ ಬಗೆಹರಿಸಲು ಸಾಧ್ಯ. ಗ್ರಾಮೀಣ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿ ಬಗೆಹರಿಸಲು ಮುಂದಾಗಬೇಕು. ಅಧಿಕಾರಿಗಳು ಜವಾಬ್ದಾರಿ ನಿಭಾಯಿಸಿ, ಅಧಿಕಾರ ಸದುಪಯೋಗಪಡಿಸಿಕೊಳ್ಳಬೇಕು. ಜನರನ್ನು ಗೌರವ, ಪ್ರೀತಿಯಿಂದ ಕಾಣಬೇಕು ಎಂದರು. ಬುಕ್ಕಾಪಟ್ಟಣ ಹೋಬಳಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ 37 ಕೋಟಿ ವಿಶೇಷ ಅನುದಾನ ತಂದು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ರಾಜ್ಯ ಸರ್ಕಾರವು ಭಾಗ್ಯಗಳ ಜೊತೆ ಅಭಿವೃದ್ಧಿ ಕೆಲಸ ಮಾಡಬೇಕು. ಭಾಗ್ಯಗಳ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ಕುಂಠಿತಗೊಂಡಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ ಶಾಸಕರಾದ ಟಿ.ಬಿ.ಜಯಚಂದ್ರ ಹಾಗೂ ಸಿ.ಬಿ.ಸುರೇಶ್‌ಬಾಬು ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆಗಳು ಲಭ್ಯವಾಗುವಂತೆ ಕ್ರಿಯಾಶೀಲ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಾಜಮ್ಮ ಚಂದ್ರನಾಯ್ಕ, ಉಪಾಧ್ಯಕ್ಷೆ ಲಕ್ಷ್ಮಿ ತಿಮ್ಮಯ್ಯ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೇರೆ ಮಹೇಶ್, ತಾಪಂ ಇಒ ಹರೀಶ್, ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕನಕಪ್ಪ ಮೂಲಸಕ್ರಿ, ಗ್ರಾ.ಪಂ. ಸದಸ್ಯರಾದ ಪುಟ್ಟಮ್ಮ, ಭೀಮಣ್ಣ, ಆರ್ ಭೂತಣ್ಣ, ಮಹಾಲಕ್ಷ್ಮಿ, ಮಾರಣ್ಣ, ಜಯಮ್ಮ, ರಾಜಣ್ಣ, ಮಹಮ್ಮದ್ ಸಫಿ ಉಲ್ಲಾ, ದಿವಾಕರ್, ತಾಪಂ ಮಾಜಿ ಸದಸ್ಯೆ ಮಂಜುಳಾ ಶೇಷಾನಾಯ್ಕ ಸೇರಿದಂತೆ ಅನೇಕ ಪ್ರಮುಖರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


