ದೇವರ ಬಗ್ಗೆ ಈ ಲೌಕಿಕ ಜಗತ್ತಿನಲಲ್ಲಿ ನಾ ಕಂಡ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ನನಗೆ ಅನಿಸಿದ್ದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ, ಸಮಾಜದಲ್ಲಿ ನನ್ನ ಪ್ರಕಾರ 4 ವರ್ಗದ ಜನರು ಅನುಭವಿಸುತ್ತಿರುವ ಜೀವನವನ್ನು ಕಂಡಿದ್ದೇನೆ. ಒಂದೊಂದಾಗಿ ಗಮನಿಸುತ್ತಾ, ನನಗೆ ತಿಳಿದಿದ್ದನ್ನು ಇಲ್ಲಿ ತಿಳಿಸುವ ಯತ್ನ ಮಾಡಿದ್ದೇನೆ.
- ದೇವರನ್ನು ನಂಬಿ ಕೆಡದೇ ಹೋದವರು.
- ದೇವರನ್ನು ನಂಬದೇ ಕೆಡದೇ ಹೋದವರು.
- ದೇವರನ್ನು ನಂಬಿ ಕೆಡುಕ ಅನುಭವಿಸುವವರು.
- ದೇವರನ್ನು ನಂಬದೇ ಕೆಡುಕ ಅನುಭವಿಸುವವರು.
ಮೊದಲನೆಯದಾಗಿ ದೇವರನ್ನು ನಂಬಿ ಕೆಡದೇ ಹೋದವರು, ಮತ್ತು ಅವರು ನಂಬಿದಷ್ಟೂ ಅವರಿಗೆ ಒಳ್ಳೆಯದು ಆಗುತ್ತಿರುವುದು, ಇವರು ಆಸ್ತಿಕರು ಎನ್ನಿಸಿಕೊಂಡವರು ಮತ್ತು ಇವರಿಗೆ ದೇವರೇ ನಮಗೆ ಎಲ್ಲವನ್ನು ಕೊಡುತ್ತಿದ್ದಾನೆ, ದೇವರಿಲ್ಲದಿದ್ದರೆ ನಮಗೆ ಜೀವನ ಕಲ್ಪಸಿಕೊಳ್ಳಲೂ ಸಾಧ್ಯವಿಲ್ಲ, ಭಯ ಭಕ್ತಿ ಪ್ರಕಟಿಸುವವರು ಮತ್ತು ದೇವರ ಬಗ್ಗೆ ಸ್ವಲ್ಪವೂ ನಕಾರಾತ್ಮ ಯೋಚನೆ ಮಾಡದಿರುವುದು, ಮತ್ತು ನಕಾರಾತ್ಮಕವಾಗಿ ಮಾತನಾಡುವವರನ್ನು ಕಂಡರೆ ಹಾಗೆಲ್ಲಾ ಮಾತನಾಡಬಾರದು ಎಂಬ ತಿಳುವಳಿಕೆ ಹೇಳುವ ಗುಣ ಹೊಂದಿರುತ್ತಾರೆ. ಇವರಿಗೆ ಸ್ವಲ್ಪ ಕಷ್ಟ ಎದುರಾದಾಗ ದೇವರಿಗೆ ನಾನು ಏನೋ ತಪ್ಪು ನಡೆದುಕೊಂಡಿರಬೇಕು ಅದಕ್ಕೆ ದೇವರು ನನಗೆ ಶಿಕ್ಷೆ ಕೊಡುತ್ತಿದ್ದಾನೆ ಎಂದುಕೊಳ್ಳುವುದು. ಹಾಗೂ ಅದರ ಪರಿಹಾರ್ಥವಾಗಿ ಹರಕೆ, ಹವನ, ಹೋಮ, ಯಾತ್ರೆ ಮಾಡುವುದು. ತನ್ನದು ತಪ್ಪಾಗಿದ್ದರೆ ಕ್ಷಮಿಸು ದೇವ ಎಂದು ಕೈ ಮುಗಿದು ಬೇಡಿಕೊಳ್ಳುವುದು ಮತ್ತು ತಮಗೆ ಎದುರಾದ ಕಷ್ಟ ಪರಿಹಾರವಾಗದಿದ್ದರೆ, ಇದು ನಮ್ಮ ಪೂರ್ವಾರ್ಜಿತ ಕರ್ಮದ ಫಲ, ಅನುಭವಿಸಲೇ ಬೇಕು ಎಂದು ನಂಬುವುದು. ಕಷ್ಟ ಅನುಭವಿಸುವುದು, ಇವರು ಸಾಮಾನ್ಯವಾಗಿ ಎಲ್ಲ ದೇವರ ಭಕ್ತರಾಗಿರುವುದರ ಜೊತೆಗೆ ತನ್ನ ಇಷ್ಟದೇವ ಒಂದನ್ನು ಬಲವಾಗಿ ನಂಬಿ ಬದುಕು ನಡೆಸುತ್ತಿರುತ್ತಾರೆ. ಆದರೆ ಇಂತಹವರಲ್ಲಿ ಕೆಲವರು ಮಾಟಮಂತ್ರಗಳನ್ನು ಸತ್ಯ ಎಂದು ಬಲವಾಗಿ ನಂಬಿದರೆ, ಮತ್ತೆ ಕೆಲವರು ನಂಬುವುದಿಲ್ಲ. ದೇವರಿರುವುದು ಸತ್ಯವಾದರೆ, ಅತೀಂದ್ರೀಯ ಶಕ್ತಿ ಇರುವುದು ಸತ್ಯ ಎಂದು ಕೆಲವರು ಒಪ್ಪಿಕೊಂಡರೆ, ಮತ್ತೆ ಕೆಲವರು ಹಾಗೇನಿಲ್ಲ ಅವೆಲ್ಲವೂ ಕೇವಲ ನಮ್ಮ ಮನಸ್ಸಿನ ದೌರ್ಬಲ್ಯ ಎಂದು ಹೇಳುವವರೂ ಇದ್ದಾರೆ. ಆದರೆ ಇವರಲ್ಲಿ ಈ ದ್ವಂದ್ವ ಯಾಕಿದೆಯೋ ನನಗೆ ಗೊತ್ತಿಲ್ಲ.
ಇನ್ನು ಎರಡನೆಯದಾಗಿ ದೇವರನ್ನು ನಂಬದೇ ಕೆಡದೇ ಹೋದವರು, ಇವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಇವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೆ ಎಲ್ಲವೂ ಒಳ್ಳೆಯದೇ ಆಗುತ್ತಿರುತ್ತದೆ, ಇವರಿಗೆ ಕಷ್ಟ ಬರಲಿ ಸುಖ ಬರಲಿ ಎಲ್ಲವನ್ನೂ ಅಂಜಿಲ್ಲದೇ ಆಳುಕಿಲ್ಲದೇ ಸ್ವೀಕರಿಸುತ್ತಿರುತ್ತಾರೆ. ಕಷ್ಟದ ದಿನಗಳು ಬಂದರೆ ದೇವರನ್ನು ನಂಬದಿದ್ದಕ್ಕೆ ನನಗೆ ಹೀಗೆ ಆಯಿತು ಎಂದು ಅಂದುಕೊಳ್ಳುವುದೇ ಇಲ್ಲ. ಇವರು ಪೂರ್ವಾರ್ಜಿತ ಕರ್ಮವನ್ನು ನಂಬುವುದಿಲ್ಲ, ಇವೆಲ್ಲವೂ ನಮ್ಮ ಕಲ್ಪನೆ ಎಂದುಕೊಳ್ಳುತ್ತಾರೆ. ದೇವರು ಎಂಬುದೇ ಇರುವುದಿಲ್ಲ ಎಂಬುದು ಇವರ ಅನಿಸಿಕೆಯಾಗಿರುತ್ತದೆ. ಇಂತಹವರನ್ನು ನಾಸ್ತಿಕ ಎನ್ನಬಹುದು. ಇವರು ಯಾವುದನ್ನೂ ನಂಬದೇ ತುಂಭ ಧೈರ್ಯವಾಗಿ ಇರುತ್ತಾರೆ. ದೇವರನ್ನು ನಂಬಿದರೆ ಅದರ ಸೈದ್ಧಾಂತಿಕ ಕಟ್ಟುಪಾಡುಗಳಿಗೆ ಒಳಗಾಗಿ, ತಮಗೆ ತಾವೇ ಸಂಕೋಲೆ ಹಾಕಿಕೊಂಡು, ಅದರ ನಿಯಮದಂತೆ ಕಟಿ ಬದ್ದವಾಗಿ ನಡೆಯುವುದು ಇವರಿಗೆ ಇಷ್ಟವಿರುವುದಿಲ್ಲ. ಮತ್ತು ಹಾಗೆ ಇರುವುದು ಇವರಿಗೆ ಕಷ್ಟದಾಯವಾಗಿ, ಆರಾಮವಲ್ಲದ ಜೀವನದಂತಾಗಬಹುದು. ಅದಕ್ಕಾಗೆ ನಂಬದೇ ಇದ್ದರೆ ಯಾವುದೇ ಸೈದ್ಧಾಂತಿಕ ಭಾವನೆಗಳಿಗೆ ಒಳಗಾಗದೇ ಮನಸ್ಸನ್ನು ಹಗುರ ಇಟ್ಟುಕೊಂಡು ಆರಾಮವಾಗಿ ಇರಭಹುದು ಎಂಬುದು ಇವರ ಅನಿಸಿಕೆಯಾಗಿರುತ್ತದೆ. ಇದರ ಜೊತೆಗೆ ಇವರಲ್ಲಿಯೂ ಕೆಲವರು ಮಾಟ ಮಂತ್ರಗಳನ್ನು ನಂಬಿದರೆ ಮತ್ತೆ ಕೆಲವರು ನಂಬುವುದಿಲ್ಲ. ಮಾಟ ಮಂತ್ರಗಳನ್ನು ಕೆಲವರು ದಾಟಿಕೊಂಡು ಹೋಗಿ ಅದು ಏನು ಆಗುತ್ತದೋ ಆಗಿಯೇ ತೀರಲಿ ಒಂದು ಕೈ ನೋಡಿಯೇ ಬಿಡುವ ಎಂಬುದಾಗಿ ಸವಾಲು ಹಾಕುವವರೂ ಇದ್ದಾರೆ. ಒಂದು ವೇಳೆ ಅಚಾನಕ್ಕಾಗಿ ಏನಾದರೂ ತೊಂದರೆ ಕಂಡುಬಂದಲ್ಲಿ ಇದು ಮಾಟ ಮಂತ್ರದ ಪ್ರಭಾವವಲ್ಲ, ಕಾಗೆ ಕೂರುವುದಕ್ಕೂ, ರೆಂಬೆ ಬೀಳುವುದಕ್ಕೂ ಒಂದೇ ಆಯಿತು ಎಂದು ಹೇಳಿಬಿಡುತ್ತಾರೆ. ಇವರಲ್ಲಿ ಕೆಲವರು ದೇವರು ಇಲ್ಲದೆಯೂ ಇರಬಹುದು, ಆದರೆ ಮಾನವ ಸತ್ತ ನಂತರ ಆತ್ಮ ಇದ್ದರೂ ಇರಬಹುದು ಎಂದು ಹೇಳುವವರು ಇದ್ದಾರೆ, ಯಾಕೆಂದರೆ ದೇಹದಲ್ಲಿ ಜೀವವಿದೆ ಎಂದರೆ ದೇಹದಲ್ಲಿ ಆತ್ಮ ಇದೆ ಎಂಬುದು ಇವರು ಕೊಡುವ ಅರ್ಥ. ಏಕೆಂದರೆ ದೇಹ ಸತ್ತ ನಂತರ ಆತ್ಮ ಹೊರಬರಲೇ ಬೇಕು ಎಂಬುದಾಗಿ.
ಇನ್ನು ಮೂರನೆಯದಾಗಿ, ದೇವರನ್ನು ನಂಬಿ ಕೆಡುಕ ಅನುಭವಿಸುವವರು. ಇವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬುದು ನನ್ನ ಅನಿಸಿಕೆ. ಕೆಲವರು ಅತಿಯಾಗಿ ದೇವರನ್ನು ನಂಬಿರುತ್ತಾರೆ, ಹೋಮ-ಹವನ, ಹರಕೆ–ಕಾಣಿಕೆ ಮತ್ತು ಯಾತ್ರೆ ಮೂಲಕ ದೇವರ ಸೇವೆ ಮಾಡುತ್ತಿರುತ್ತಾರೆ ಆದರೂ ಇವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟದ ಸಂಕೋಲೆಗಳಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಮೇಲೆ ಬರಲು ಇವರಿಂದ ಸಾಧ್ಯವಿಲ್ಲ. ಇವರ ಜೀವನದಲ್ಲಿ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗುತ್ತಿರುತ್ತದೆ. ಅಪರೂಪಕ್ಕೆ ಏನೋ ಒಂದು ಒಳ್ಳೆಯದು ಆಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತಿನ್ನೇನೋ ತಿರುವು ಪಡೆದುಕೊಂಡು ಕಷ್ಟದ ಹಾದಿಯಾಗಿ ಮಾರ್ಪಾಡಾಗಿ ಬಿಟ್ಟಿರುತ್ತದೆ. ನಾನು ನಿಯತ್ತಿನಿಂದ, ಧರ್ಮದಿಂದ ಇದ್ದರೂ ನನಗೆ ಒಳ್ಳೆಯ ದಿನಗಳು ಬರಲೇ ಇಲ್ಲವಲ್ಲ ದೇವರು ಜೀವನ ಪರ್ಯಂತ ಬರಿ ಕಷ್ಟವನ್ನೇ ಕೊಟ್ಟುಬಿಟ್ಟನಲ್ಲ, ನಾನೇನು ಕರ್ಮ ಮಾಡಿದ್ದೆ ಎಂದು ಯೋಚಿಸುತ್ತಿರುತ್ತಾರೆ. ಇವರು ದೇವರನ್ನು ನಂಬದವರನ್ನು ನೋಡಿ ಮನದಲ್ಲಿ ಇವರು ದೇವರನ್ನೇ ನಂಬುವುದಿಲ್ಲ ಆದರೂ ಇವರಿಗೆ ಏನೂ ಆಗುವುದಿಲ್ಲ ಎಂದುಕೊಳ್ಳುತ್ತಿರುತ್ತಾರೆ. ಆದರೂ ದೇವರ ಬಗ್ಗೆ ಇವರು ನಕಾರಾತ್ಮಕವಾಗಿ ಯೋಚನೆ ಮಾಡುವುದೇ ಇಲ್ಲ. ದೇವರ ಬಗ್ಗೆ ನಕಾರಾತ್ಮಕವಾಗಿ ಯೋಚಿಸಿದರೆ ದೇವರು ನನಗೆ ಮತ್ತುಷ್ಟು ಕಷ್ಟ ಕೊಡಬಹುದು ಎಂಭ ಭಯದಲ್ಲಿ ಇರುತ್ತಾರೆ. ಕೊನೆಗೆ ತಮಗೆ ಬಂದ ಕಷ್ಟವನನ್ನು ನೋಡಿ ಏನೋ ನನ್ನ ಕರ್ಮ ಅನುಭವಿಸುತ್ತಿದ್ದೇನೆ ಅಂದುಕೊಂಡು, ಬಂದ ಹಾಗೆ ಜೀವನ ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರಿಗಿಂತ ಹೆಚ್ಚು ಕಷ್ಟ ಅನುಭವಿಸುತ್ತಿರುವವರನ್ನು ನೋಡಿ ನಾನು ಇವರಿಗಿಂತ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವವರು ಇದ್ದಾರೆ. ಇವರು ಹೆಚ್ಚಾಗಿ ಮಾಟ ಮಂತ್ರಗಳನ್ನು ನಂಬುತ್ತಾರೆ. ಏಕೆಂದರೆ ಇವರ ಹಿತ ಶತೃಗಳು ನೋಡು ನೀನು ಚೆನ್ನಾಗಿರುವುದು ಅವರು ಸಹಿಸಲ್ಲ ಅದಕ್ಕಾಗೆ ಅವರು, ನಿನಗೆ ನೀನು ಮೇಲೆ ಏಳದಂತೆ ಮಾಟ ಮಂತ್ರ ಮಾಡಿಸಿದ್ದಾರೆ ಎಂಬುದಾಗಿ ನಂಬಿಸಿದರೆ ಅದನ್ನು ಹೆಚ್ಚಾಗಿ ನಂಬುತ್ತಾರೆ. ಮತ್ತು ದೇವರು ಮುಂದೊಂದು ದಿನ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಮತ್ತೂ ದೇವರನ್ನು ಕಡುವಾಗಿ ನಂಬಿರುತ್ತಾರೆ. ಮುಂದೆ ಶಿಕ್ಷೆ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಇವುಗಳಿಗೆಲ್ಲಾ ಮುಂದೆ ಉತ್ತರ ಕೊಡುತ್ತೇನೆ.
ಇನ್ನು 4ನೆಯದಾಗಿ ಮತ್ತು ಕೊನೆಯದಾಗಿ, ದೇವರನ್ನು ನಂಬದೇ ಕೆಡುಕ ಅನುಭವಿಸುವವರು. ಇವರನ್ನು ಸಮಾಜದಲ್ಲಿ ನಾನು ಬಹಳ ನೋಡಿದ್ದೇನೆ. ಆದರೆ ಇವರ ಬಗ್ಗೆ ನನಗೆ ಅರ್ಥೈಸುವುದು ಇಲ್ಲಿ ಸ್ವಲ್ಪ ಕಷ್ಟವಾಗುತ್ತಿದೆ. ಇಂತಹವರು ಸ್ವಲ್ಪ ಮಟ್ಟಿಗೆ ನಾಸ್ತಿಕ ವರ್ಗಕ್ಕೆ ಹೋಲುತ್ತಾರೆ. ಇಂತಹವರು ದೇವರನ್ನು ನಂಬುವುದೂ ಇಲ್ಲ, ಕಷ್ಟಕ್ಕೆ ದೇವರನ್ನು ದೂರುವುದೂ ಇಲ್ಲ. ಇಂತಹವರಲ್ಲಿ ಕೆಲವರನ್ನು ಬಹಳ ಕಷ್ಟಪಟ್ಟು ದೇವರನ್ನು ನಂಬುವ ಹಾಗೆ ಮಾಡಬಹುದು. ಅದು ಹೇಗೆಂದರೆ ದೇವರನ್ನು ನಂಬುವವರು ಇವರ ಸ್ನೇಹದಲ್ಲಿ ಇದ್ದರೆ, ಇವರ ನಂಬಿಕಸ್ಥರಾಗಿದ್ದರೆ, ಇವರ ಬಳಿಗೆ ಬಂದು, ಇವರ ಕಷ್ಟವನ್ನು ನೋಡಿ, ನೋಡು ನೀನು ಇಂತಹದ್ದೊಂದು ಊರಿನಲ್ಲಿ ಇಂತಹ ಒಂದು ದೇವರು ಇದೆ, ಅದು ತುಂಬ ಪವರ್ ಫುಲ್, ಇಲ್ಲಿಗೆ ಹರಕೆ ಹೊತ್ತುಕೋ ನಿನಗೆ ಖಂಡಿತ ಒಳ್ಳೆಯದು ಆಗುತ್ತದೆ, ನಿನ್ನ ಕಷ್ಟವೆಲ್ಲಾ ದೂರವಾಗುತ್ತದೆ, ಒಂದು ವೇಳೆ ಆಗದಿದ್ದಾಗ ಬೇಕಾದರೆ ನನ್ನನ್ನು ಕೇಳು, ನನಗೂ ಕೂಡ ಗೊತ್ತಿರಲಿಲ್ಲ, ಯಾರೋ ಹೇಳೀದ್ದು, ನಾನು ಕಷ್ಟದಲ್ಲಿ ಇದ್ದಾಗ ಅವರು ಹೇಳಿದ ಹಾಗೆ ಹರಕೆ ಹೊತ್ತೆ, ನನಗೆ ಈಗ ಎಲ್ಲವೂ ಒಳ್ಳೆಯದೇ ಅಗುತ್ತಿದೆ ಎಂದು ಹೇಳುತ್ತಾರೆ, ಇಂತಹ ಸಂದರ್ಭಗಳಲ್ಲಿ ಇವರು, ಅವರು ಹೇಳಿದ ದೇವರಿಗೆ ಒಂದು ಬಾರಿ ನಡೆದುಕೊಂಡರೆ ಹೇಗೆ ಎಂದು ಯೋಚಿಸಿ ಹರಕೆ ಹೊತ್ತುಕೊಳ್ಳುತ್ತಾರೆ ಎಂದುಕೊಳ್ಳೋಣ,ಅಚಾನಕ್ಕಾಗಿ ತಕ್ಷಣ ಒಳ್ಳೆಯದು ಆಗಿಬಿಡುತ್ತದೆ ಎಂದುಕೊಳ್ಳೋಣ ಆಗ ಇಲ್ಲಿಯೂ ಕೂಡ ಕಾಗೆ ಹಾರಿಕೊಂಡು ಬಂದು ಕೂರುವುದಕ್ಕೂ, ರೆಂಬೆ ಕಳಚಿಕೊಂಡು ಬೀಳುವುದಕ್ಕೂ ಒಂದೇ ಸಮಯವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಇವರಂತು ಖಂಡಿತ ಆ ದೇವರಿಗೆ ದೊಡ್ಡ ಭಕ್ತರಾಗಿ ಪರಿವರ್ತಿತರಾಗಿ ಬಿಡುತ್ತಾರೆ. ಇಲ್ಲಿ ದೇವರಿಗೆ ಆ ಸಮಯದಲ್ಲಿ ನಡೆದುಕೊಂಡಿರದಿದ್ದರೆ ಏನಾಗುತ್ತಿತ್ತು ಎಂದು ಕಲ್ಪಸಿಕೊಂಡು ಹೇಳುವುದು ಸಾಧ್ಯವಿಲ್ಲ. ಹೆಚ್ಚೆಂದರೆ ಅವರಿಗೆ ಆ ಸಮಯದಲ್ಲಿ ಒಳ್ಳೆಯದು ಆಗುವಂತಿದ್ದರೆ, ನಡೆದುಕೊಳ್ಳದಿದ್ದರೂ ಕೂಡ ಆ ಸಮಯದಲ್ಲಿ ಒಳ್ಳೆಯದು ಆಗುತ್ತಿತ್ತು ಎಂದು ಹೇಳಬಹುದೇ? ಆಗ ಇವರು ಅಯ್ಯೋ ನಾನು ಎಂತಹ ದೊಡ್ಡ ತಪ್ಪು ಮಾಡಿಬಿಟ್ಟೆ ದೇವರನ್ನು ನಾನು ಮೊದಲೇ ನಂಬಿದ್ದರೆ ನನಗೆ ಇಷ್ಟೊಂದು ಕಷ್ಟ ಬರುತ್ತಿರಲಿಲ್ಲವಲ್ಲ ಎಂದು ಪಶ್ಚಾತ್ತಾಪ ಪಡುವವರು ಇದ್ದಾರೆ.
ಇವಕ್ಕೆಲ್ಲಾ ಉತ್ತರ ನನ್ನ ಈ ಹಿಂದಿನ ಲೇಖನ “ನಾವು ಏಕೆ ಹೀಗೆ” – “ನನ್ನ ಪ್ರಕಾರ ಈ ಜಗತ್ತಿಗೆ ನಾವು ಜೀವ ವಿರುವ ದೇಹಗಳು ಎಂಬ ವಿಚಾರವೇ ತಿಳಿಯದೇ ಹೋಗಿರಬಹುದು ಎನಿಸುತ್ತದೆ, ಅದಕ್ಕೆ ಜೀವ, ನಿರ್ಜೀವ ಎಂಬ ಕಲ್ಪನೆಯೇ ಇಲ್ಲದಿರಬಹುದು, ಅದು ಹೇಗೆಂದರೆ ವಿವಿಧ ಕಾಲ ಮಜಲುಗಳಲ್ಲಿ, ಒಂದು ಅನುಕೂಲಕರ ಪರಿಸ್ಥಿತಿಗಳಲ್ಲಿ ರಾಸಾಯನಿಕ ವಿವಿಧ ಸಂಯೋಜನೆಗಳಲ್ಲಿ ಏಕಕೋಶದಂತಹ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು, ಬಹುಕೋಶ ಜೀವಿಗಳಾದ ಪ್ರಾಣಿ ಹಾಗು ಮನುಷ್ಯನ ವರೆಗೆ ಸಾವಿರಾರು ವರ್ಷಗಳ ಕಾಲ ನಿರಂತರ ಪ್ರಾಕೃತಿಕ ರಾಸಾಯನಿಕ ಪ್ರಕ್ರಿಯೆಗಳಿಂದ ತಳೆದಿರುವ ಜೀವ, ಕೇವಲ ಪ್ರಕೃತಿಯ “ಆಕಸ್ಮಿಕ” ಒಂದು ಅವಿಭಾಜ್ಯ ಅಂಗ ಅಷ್ಟೇ ಎಂದುಕೊಳ್ಳಬಹುದು” – ಇಲ್ಲಿ ಸೃಷ್ಟಿ ನಾಶ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ, ಇವೆಲ್ಲ ತನ್ನ ಪಾಡಿಗೆ ತಾನು ಕಾಲ ಘಟ್ಟದಲ್ಲಿ ನಡೆಯುತ್ತಿರುವ ಈ ಜಗತ್ತಿನ ಒಂದು ವಿದ್ಯಮಾನದಂತೆ ನಡೆಯುತ್ತಿರುತ್ತದೆ ಅಷ್ಟೇ. ಇದು ಸೃಷ್ಟಿಯ ನಿಮಯ. ಈ ಮೇಲಿನ 4 ಅಂಶಗಳೂ ಅಷ್ಟೇ, ಸಮಯ ಸಂದರ್ಭಗಳಿನಗೆ ನಾವು ಸ್ವತಹ ಒಳಗಾಗಿರುತ್ತೇವೆ. ಒಳ್ಳೆಯ ಕೆಟ್ಟ ಎಂಬ ಪದಗಳಿಗೆ ಇಲ್ಲಿ ಅರ್ಥವೇ ಇರುವುದಿಲ್ಲ. ಎಲ್ಲವೂ ಯಾರದೇ ಆದೇಶವಿಲ್ಲದಿದ್ದರೂ ಆ ಕಾಲಗಳಲ್ಲಿ ನಾವು ಪ್ರಯಾಣ ಮಾಡಲೇಬೇಕಾಗುತ್ತದೆ. ಮತ್ತು ನಾವು ಪ್ರಕೃತಿಯನ್ನೆ “ದೇವರು” ಎಂಬುದಾಗಿ ಅರ್ಥ ಕೊಡುತ್ತಾ, ಬಹುತೇಕ ಜಗದ ಎಲ್ಲರ ನಂಬಿಕೆ ಹೊಂದಿದೆ. ಇದರಂತೆ ನಾವು “ದೇವರು” ಎಂಬುದು ಕೂಡ ಒಂದು ನಂಬಿಕೆ ಎಂದುಕೊಂಡಿದ್ದೇವೆ. ಮತ್ತು ದೇವರ ಬಗ್ಗೆ ಅಭಿಪ್ರಾಯ ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಅಭಿಪ್ರಾಯ ಬೇರೆಯವರ ನಂಬಿಕೆಗೆ ಧಕ್ಕೆ ಆಗದಂತೆ ಇರಬೇಕು ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ಹೊಸವರ್ಷ 2026 ಆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.

ಸಂಪಾದಕರ ಮಾತು:
ಈ ಲೇಖನವು ದೇವರು, ನಂಬಿಕೆ, ನಾಸ್ತಿಕತೆ ಮತ್ತು ಮಾನವ ಜೀವನದಲ್ಲಿ ಎದುರಾಗುವ ಸುಖ–ದುಃಖಗಳ ಬಗ್ಗೆ ಸಮಾಜದಲ್ಲಿ ಕಾಣಿಸಿಕೊಳ್ಳುವ ವೈವಿಧ್ಯಮಯ ಅನುಭವಗಳನ್ನು ತಟಸ್ಥವಾಗಿ ಅವಲೋಕಿಸುತ್ತದೆ. ದೇವರನ್ನು ನಂಬಿದರೂ–ನಂಬದಿದ್ದರೂ ಬದುಕಿನಲ್ಲಿ ಒಳ್ಳೆಯದು ಹಾಗೂ ಕೆಟ್ಟದು ಎರಡೂ ಸಂಭವಿಸುತ್ತವೆ ಎಂಬ ವಾಸ್ತವವನ್ನು ನಾಲ್ಕು ವಿಭಿನ್ನ ವರ್ಗಗಳ ಮೂಲಕ ಲೇಖಕರು ವಿಶ್ಲೇಷಿಸಿದ್ದಾರೆ. ಇದು ಯಾವುದಾದರೂ ಒಂದು ನಂಬಿಕೆಯನ್ನು ಪ್ರತಿಪಾದಿಸುವ ಪ್ರಯತ್ನವಲ್ಲ; ಬದಲಾಗಿ, ಮಾನವ ಮನಸ್ಸು ಪರಿಸ್ಥಿತಿಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಚಿಂತನಾ ಬರಹವಾಗಿದೆ.
ಲೇಖನದ ಕೇಂದ್ರಬಿಂದು “ದೇವರು” ಎಂಬ ಕಲ್ಪನೆಯಿಗಿಂತಲೂ, ಪ್ರಕೃತಿ, ಕಾಲ, ಸಂದರ್ಭ ಮತ್ತು ಆಕಸ್ಮಿಕತೆ ಎಂಬ ಅಂಶಗಳು ಮಾನವ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬ ತಾತ್ವಿಕ ಪ್ರಶ್ನೆ. ದೇವರನ್ನು ನಂಬುವವರೂ, ನಂಬದವರೂ ತಮ್ಮ ತಮ್ಮ ಅನುಭವಗಳ ಆಧಾರದಲ್ಲಿ ತೃಪ್ತಿ ಅಥವಾ ನಿರಾಶೆ ಪಡೆಯುತ್ತಾರೆ ಎಂಬುದನ್ನು ಲೇಖನ ಸಮತೋಲನದಿಂದ ಮುಂದಿಡುತ್ತದೆ. ಮುಖ್ಯವಾಗಿ, ಬೇರೆಯವರ ನಂಬಿಕೆಗೆ ಧಕ್ಕೆ ಆಗದಂತೆ ಅಭಿಪ್ರಾಯ ವ್ಯಕ್ತಪಡಿಸುವ ಜವಾಬ್ದಾರಿಯ ಅಗತ್ಯವನ್ನು ಲೇಖಕರು ಒತ್ತಿ ಹೇಳಿರುವುದು ಗಮನಾರ್ಹ.
ಇದು ಓದುಗರನ್ನು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಕರೆದೊಯ್ಯುವ ಬರಹವಲ್ಲ; ಬದಲಾಗಿ, “ನಾವು ಏಕೆ ಹೀಗೆ ಯೋಚಿಸುತ್ತೇವೆ?” ಎಂಬ ಪ್ರಶ್ನೆಯನ್ನು ನಮ್ಮೊಳಗೆ ಎಬ್ಬಿಸುವ ಪ್ರಯತ್ನ. ಒಪ್ಪಿಗೆಯಾಗಲಿ, ಭಿನ್ನಾಭಿಪ್ರಾಯವಾಗಲಿ—ಚಿಂತನೆಗೆ ಆಹಾರ ನೀಡುವ ಈ ಲೇಖನ ಹೊಸ ವರ್ಷದ ಆರಂಭದಲ್ಲಿ ಆತ್ಮಪರಿಶೀಲನೆಗೆ ದಾರಿ ಮಾಡಿಕೊಡುತ್ತದೆ.
ಹೊಸ ವರ್ಷ 2026 ಎಲ್ಲರಿಗೂ ಮಾನವೀಯತೆ, ಸಹಿಷ್ಣುತೆ ಮತ್ತು ವಿವೇಕವನ್ನು ಹೆಚ್ಚಿಸಲಿ ಎಂಬ ಆಶಯದೊಂದಿಗೆ, ಈ ಲೇಖನವನ್ನು ಓದುಗರ ಚರ್ಚೆಗೆ ಅರ್ಪಿಸುತ್ತೇವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


