ತಿಪಟೂರು: ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರು ಜಗತ್ತಿನ ಬೆಳಕು. ಇವರುಗಳು ಸಮಾಜದಲ್ಲಿ ದೊಡ್ಡ ಪಿಡುಗಾಗಿದ್ದ ಅಸಮಾನತೆಯ ವಿರುದ್ಧ ಹೋರಾಡಿದ ಮಹಾ ಪುರುಷರು ಎಂದು ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ಅವರು ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಡಾ. ಅಂಬೇಡ್ಕರ್ ಸೇನೆ(ರಿ.) ವತಿಯಿಂದ ಹಮ್ಮಿಕೊಂಡಿದ್ದ ಭೀಮೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಜೀವಿತದವರೆಗೂ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಬುದ್ಧ ಶಾಂತಿ ಸಮಾನತೆಗೆ ಹೋರಾಟ ಮಾಡಿದರೆ, ಬಸವಣ್ಣ ಸಮಾನತೆಗೆ ಹೋರಾಟ ಮಾಡಿ ದಮನಿತರಿಗೆ ಧ್ವನಿಯಾದರು ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಶೋಷಿತ ಸಮುದಾಯಗಳ ಆಶಾಕಿರಣ, ಭಾರತದ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್ ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ ನೋವು, ನಮ್ಮ ದೇಶದ ಜನ ಅನುಭವಿಸಬಾರದು, ದೇಶದಲ್ಲಿ ಅಸಮಾನತೆ ಸಂಪೂರ್ಣವಾಗಿ ಹೋಗಲಾಡಿಸಬೇಕು ಎಂದು ತಮ್ಮ ಸುಖ ದುಃಖವನ್ನೆಲ್ಲ ತ್ಯಾಗ ಮಾಡಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಎ.ಯೋಗೇಶ್ ಮಾತನಾಡಿ, ಸಮಾಜದಲ್ಲಿ ಬಡವ ಬಲ್ಲಿದ ಎನ್ನದೆ, ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವ ಅಂಬೇಡ್ಕರ್ ಕನಸು ನನಸಾಗಲು ಸುಶಿಕ್ಷಿತರಾಗಬೇಕು ಎಂದರು.
ಸಮಾಜದಲ್ಲಿರುವುದು ಗಂಡು, ಹೆಣ್ಣು ಎರಡೇ ಜಾತಿ:
ಶಾಸಕ ಕೆ.ಷಡಕ್ಷರಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರು ಸರ್ವ ಜನಾಂಗದ ಸ್ವತ್ತು. ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಳ್ಳಿ. ಸಮಾಜದಲ್ಲಿ ಗಂಡು, ಹೆಣ್ಣು ಎರಡೇ ಜಾತಿ. ಸಮಾಜದಲ್ಲಿ ತಾರತಮ್ಯ ದೂರವಾಗಬೇಕು ಎಂದು ತಿಳಿಸಿದರು.
ನಗರ ದೇವತೆ ಶ್ರೀ ಕೆಂಪಮ್ಮ ದೇವಾಲಯದಿಂದ ವೇದಿಕೆಯವರೆಗೆ ಬೈಕ್ ರ್ಯಾಲಿ ನಡೆಯಿತು. ವೈದ್ಯ ಡಾ. ಜಿ.ಎಸ್. ಶ್ರೀಧರ್, ಕೊಪ್ಪ ಶಾಂತಪ್ಪ, ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮತ್ತು ಗ್ರಾಪಂ ಸದಸ್ಯ ಆನಂದ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕಾಂತರಾಜು, ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಕುಪ್ಪಾಳು ರಂಗಸ್ವಾಮಿ, ಮಾರುತಿ ಗಂಗಹನುಮಯ್ಯ, ಚಂದನ್ ಮತ್ತು ಮೋಹನ್ ಬಾಬು ಸೇರಿದಂತೆ ಸೇನೆಯ ಪದಾಧಿಕಾರಿಗಳು ಹಾಗೂ ಮುಖಂಡರುಗಳಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


