ತುಮಕೂರು: ದೇಶದ ಜನತೆಗೆ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಇಂತಿಯಾಜ್ ಅಹಮದ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 140ನೇ ಸ್ಥಾಪನಾ ದಿನ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರು ಉತ್ತಮ ಬಾಂಧವ್ಯದಿಂದ ಸಂವಿಧಾನದ ಆಶಯಗಳೊಂದಿಗೆ ನೆಮ್ಮದಿಯ ಬದುಕು ಸಾಗಿಸುವಂತಹ ಸದಾವಕಾಶವನ್ನು ಒದಗಿಸಿಕೊಟ್ಟಿದೆ ಎಂದು ನುಡಿದರು.
1885ರಲ್ಲಿ ಎ.ಒ. ಹ್ಯೂಮ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷವು, ಭಾರತದ ಸ್ವಾತಂತ್ರ್ಯ ಹೋರಾಟದ ಹೃದಯವಾಗಿತ್ತು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ತ್ಯಾಗ, ಬಲಿ ಮತ್ತು ಆದರ್ಶಗಳ ಫಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯ ಎಂಬ ಮೌಲ್ಯಗಳನ್ನು ತನ್ನ ಉಸಿರಿನಂತೆ ಕಾಪಾಡಿಕೊಂಡು ಬಂದಿದೆ, ಸ್ವಾತಂತ್ರ್ಯ ನಂತರವೂ ದೇಶ ನಿರ್ಮಾಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಅನನ್ಯವಾಗಿದೆ. ಪಂಚವಾರ್ಷಿಕ ಯೋಜನೆಗಳು, ಉಕ್ಕು ಕಾರ್ಖಾನೆಗಳು, ಐಐಟಿ, ಐಐಎಂ, ಅಣುಶಕ್ತಿ, ಬಾಹ್ಯಾಕಾಶ ಸಂಶೋಧನೆ, ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ವಿಸ್ತರಣೆ ಇವೆಲ್ಲವೂ ಕಾಂಗ್ರೆಸ್ ಆಡಳಿತದ ಫಲಗಳು. ಇಂದಿರಾಗಾಂಧೀಜಿಯವರ ದೃಢ ನಾಯಕತ್ವ, ರಾಜೀವ್ ಗಾಂಧೀಜಿಯವರ ಆಧುನಿಕ ಭಾರತದ ಕನಸು, ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳು, ಹಾಗೂ ಇಂದಿನ ನಾಯಕತ್ವದ ಸಾಮಾಜಿಕ ನ್ಯಾಯದ ಬದ್ಧತೆ? ಇವೆಲ್ಲವೂ ಕಾಂಗ್ರೆಸ್ ಪಕ್ಷದ ನಿರಂತರ ಹೋರಾಟದ ಪ್ರತೀಕಗಳಾಗಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ನಿಶಾದ್, ವಾಸಿಂ, ಇಸ್ಮಾಯಿಲ್ ಹರೀಶ್ ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


