ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ಮಹಿಳೆಯರನ್ನು ಸೆಳೆಯಲು ಸೀರೆ ಹಂಚುವುದು, ಹಣ ನೀಡುವ ಕೆಲಸ ಮಾಡುತ್ತಾರೆ. ಆದರೆ ಕೆ.ಆರ್.ಎಸ್ ಪಕ್ಷದವರು ಮಹಿಳೆಯರನ್ನು ಸೆಳೆಯಲು ಈ ರೀತಿಯ ತಂತ್ರಗಳನ್ನು ರೂಪಿಸುವ ಬದಲು ಕಲೆ, ಕ್ರೀಡೆ, ರಂಗೋಲಿ ಸ್ಪರ್ಧೆ, ಹಳ್ಳಿಯ ಜಾನಪದ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಕೆಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧು ಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದ ಜೆವಿಆರ್ ಕಲ್ಯಾಣ ಮಂಟಪದಲ್ಲಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರ ಸ್ನೇಹಕೂಟ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಮಾತೃವಂದನೆ, ದುರ್ಗಾಪೂಜೆ, ಧರ್ಮಸ್ಥಳಕ್ಕೆ ಕಳುಹಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಎಲ್ಲಾ ತಂತ್ರಗಳು ಮಹಿಳಾ ಕಾರ್ಯಕರ್ತರನ್ನು ಹೆಚ್ಚಿಸುವುದಾಗಿದೆ ಎಂದರಲ್ಲದೆ, ಪಕ್ಷದ ಕಾರ್ಯಕರ್ತರು ನಿಮ್ಮ ಗ್ರಾಮ ಪಂಚಾಯಿತಿಗಳ ಬಗ್ಗೆ ತಿಳಿದುಕೊಳ್ಳಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಹಾಗೂ ಇತ್ತೀಚಿನ ಹಾಗೂ ಹಿಂದಿನ ರಾಜಕೀಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಿ ಎಂದರು.
ಜ್ಞಾನಸಿಂಧು ಸ್ವಾಮಿ ಮಾತನಾಡಿ, ಕಾರ್ಯಕರ್ತರು ಗ್ರಾ.ಪಂ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಕ್ಷೇತ್ರ ವ್ಯಾಪ್ತಿಯ ಜನರಲ್ಲಿ ಲಂಚಮುಕ್ತ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರಬೇಕು. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಜಾಗೃತಗೊಳಿಸಬೇಕು. ಯುವಕರ ಸಭೆ ಕರೆದು ಅರಿವು ಮೂಡಿಸಬೇಕು ಎಂದು ಕರೆ ಕೊಟ್ಟರು.
ಕೆಆರ್‌ಎಸ್ ಪಕ್ಷದ ರವಿನಂದನ್ ಮಾತನಾಡಿ, ತಾಲೂಕು ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಾರ್ಯಕರ್ತರಲ್ಲಿ ಮಾಹಿತಿ ಹಕ್ಕಿನ ಬಗ್ಗೆ ತಿಳಿಸಿ ಕಚೇರಿಗಳಲ್ಲಿ ತಡವಾಗುತ್ತಿರುವ ಸರ್ಕಾರಿ ಕೆಲಸಗಳ ಬಗ್ಗೆ ಶೀಘ್ರವಾಗಿ ಮಾಡಿಕೊಡುವಂತೆ ತಿಳುವಳಿಕೆ ನೀಡಬೇಕು ಎಂದರು.
ಸಭೆಯಲ್ಲಿ ಕೆಆರ್ ಎಸ್ ಪಕ್ಷದ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ನಾಗಣ್ಣ, ರಮೇಶ್, ಜಗದೀಶ್, ನರಸಿಂಹಣ್ಣ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


