ತುಮಕೂರು: ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣವನ್ನೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಟೀಕಿಸಿದರು.
ತುಮಕೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇವರಾಜ ಅರಸು ಅವರು ರಾಜ್ಯದ ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರು. ಸಿದ್ದರಾಮಯ್ಯ ಅವರು ಅರಸು ಅವರ 2,792 ದಿನಗಳ ಆಡಳಿತದ ದಾಖಲೆಯನ್ನು ಮುರಿದು ಹೆಚ್ಚು ದಿನ ಅಧಿಕಾರ ನಡೆಸಿದ ದಾಖಲೆ ನಿರ್ಮಿಸಿರಬಹುದು. ಆದರೆ, “ಅಧಿಕಾರದಲ್ಲಿ ಎಷ್ಟು ದಿನ ಇದ್ದರು ಎನ್ನುವುದು ಮುಖ್ಯವಲ್ಲ, ಆ ಅವಧಿಯಲ್ಲಿ ಜನರಿಗಾಗಿ ಏನು ಮಾಡಿದರು ಎನ್ನುವುದು ಮುಖ್ಯ” ಎಂದು ಶಾಸಕರು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸಿ ‘ಒಡೆದು ಆಳುವ ರಾಜಕಾರಣ’ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ಇಂದು ಕೋಮು ಸಂಘರ್ಷದ ಬೇಗೆಯಲ್ಲಿ ಬೇಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಮಕೃಷ್ಣ ಹೆಗಡೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಆಡಳಿತವನ್ನು ನೆನಪಿಸಿಕೊಂಡ ಸುರೇಶ್ ಗೌಡ, ರೈತ ಪರ ಬಜೆಟ್ ನೀಡಿದ ಯಡಿಯೂರಪ್ಪ ಅವರ ಕೆಲಸಕ್ಕೆ ಸಿದ್ದರಾಮಯ್ಯನವರನ್ನು ಹೋಲಿಸಲು ಸಾಧ್ಯವಿಲ್ಲ ಎಂದರು. ಅಲ್ಲದೆ, ಎಸ್ ಸಿ–ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂದು ಆರೋಪಿಸಿದರು.
14 ಗ್ರಾಪಂ ಸೇರ್ಪಡೆ ವಿಚಾರ:
ತುಮಕೂರು ನಗರದ ವ್ಯಾಪ್ತಿಗೆ 14 ಗ್ರಾಮ ಪಂಚಾಯಿತಿಗಳನ್ನು ಸೇರಿಸುವ ಸಂಪುಟದ ತೀರ್ಮಾನಕ್ಕೆ ಸುರೇಶ್ ಗೌಡ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಸಿಗಬೇಕಾದ ‘ಗ್ರಾಮೀಣ ಕೃಪಾಂಕ’ ತಪ್ಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. “ವಿರೋಧ ಪಕ್ಷದ ಶಾಸಕನಾಗಿ ನಾನು ಈ ವಿಷಯದಲ್ಲಿ ಅಸಹಾಯಕನಾಗಿದ್ದೇನೆ. ಆದರೆ ನಗರ ವಿಸ್ತರಣೆಯಾಗುವುದಾದರೆ ಕನಿಷ್ಠ 200 ಕೋಟಿ ರೂ. ವಿಶೇಷ ಅನುದಾನ ನೀಡಿ ಆ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸಬೇಕು” ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಪ್ರಭಾಕರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


