ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶಾಮಿಯಾನ ಮತ್ತು ಫ್ಲವರ್ ಡೆಕೋರೇಷನ್ ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ ಪ್ರಕರಣವನ್ನು ಭೇದಿಸಿರುವ ಜಿಲ್ಲೆಯ ಪೊಲೀಸರು ನಾಲ್ವರು ಅಂತರಾಜ್ಯ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಕೆ.ವಿ.ಅಶೋಕ್ ಅವರು ತಮಿಳುನಾಡಿನ ಹೊಸೂರು ಬತ್ತಲಪಲ್ಲಿಯ ಸತೀಶ್ ಕುಮಾರ್ (40), ಸೇಲಂ ತಾಲೂಕಿನ ಕಡತ್ತೂರು ಗ್ರಾಮದ ಕೇಶವನ್ (43), ಸೋಲಂದಡಿ ತಾಲೂಕಿನ ದಿಂಡಲೋನ ಕವಿತೇಶ್ವರನ್ ಹಾಗೂ ದಿಂಡಗಲ್ ಜಿಲ್ಲೆಯ ಅರುಣ್ ಪ್ರಶಾಂತ್ (26) ಎಂಬುವರೇ ಬಂಧಿತ ಆರೋಪಿಗಳಾಗಿದ್ದು, ತಿಪಟೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ, ಸಿರಾ, ಹಂದನಕೆರೆ, ತುಮಕೂರಿನ ಜಯನಗರ ಪೊಲೀಸರು ಹಾಗೂ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ಆರೋಪಿಗಳನ್ನು ಸೆರೆಹಿಡಿದಿರುವುದಾಗಿ ತಿಳಿಸಿದರು.
ಕೊಲೆಯಾದ ಮಂಜುನಾಥ್ ಅವರ ಸಹೋದರ, ಕೃತ್ಯ ನಡೆದ ದಿನ ರಾತ್ರಿಯೇ ಹುಳಿಯಾರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಎಎಸ್ಪಿ ಯಶ್‌ಕುಮಾರ್ ಶರ್ಮಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಚಿ.ನಾ.ಹಳ್ಳಿ ಸಿಪಿಐ ಜನಾರ್ದನ್, ಸಿರಾ ಸಿಪಿಐ ಪ್ರವೀಣ್ ಕುಮಾರ್, ತುಮಕೂರಿನ ಜಯನಗರ ಪಿಎಸ್ ಐ ತಿರುಮಲೇಶ್, ಹಂದನಕೆರೆ ಪಿಎಸ್ ಐ ಚಿತ್ತರಂಜನ್ ಹಾಗೂ ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು ಎಂದು ತನಿಖಾ ತಂಡವನ್ನು ಎಸ್ಪಿ ಕೆ.ವಿ.ಅಶೋಕ್ ಪ್ರಶಂಸಿಸಿದರು.
ಪಾವಗಡ ವೈ.ಎನ್.ಹೊಸಕೋಟೆಯಲ್ಲಿ ಬುಧವಾರ ಜರುಗಿದ ಕೊಲೆ ಪ್ರಕರಣದಲ್ಲಿ ಕೌಟುಂಬಿಕ ಹಣಕಾಸು ವಿಚಾರದಲ್ಲಿ ಕೊಲೆ ನಡೆದಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಯಶ್ ಕುಮಾರ್ ಶರ್ಮಾ ಹಾಗೂ ಪಿಎಸ್ ಐ ತಿರುಮಲೇಶ್ ಇತರರಿದ್ದರು.
ಮಾಸ್ಕ್ ಧಾರಿಗಳು:
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಜಮೀನಿನಲ್ಲಿ ಕೊಲೆಯಾದ ಮಂಜುನಾಥ್ ಜ. 11 ರಂದು ರಾತ್ರಿ 8.30 ಗಂಟೆ ಸುಮಾರಿನಲ್ಲಿ ತಮ್ಮ ಹೊಸಮನೆಯ ಹೊರಗೆ ಹಿರಿಯ ಮಗಳು ಅನುಷಾ, ಕಿರಿಯ ಪುತ್ರಿ ಯಶಸ್ವಿ ಜೊತೆಗೆ ಖಾರಪುರಿ ತಿನ್ನುತ್ತಾ ಕುಳಿತಿದ್ದರು. ಈ ವೇಳೆ ಮನೆಯ ಪಕ್ಕದ ನಳ್ಳಿಯ ಬಳಿ ಯಾರೋ ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದು ಅನುಷಾಗೆ ಕಾಣಿಸಿದ್ದು, ಯಾರೋ ಕಳ್ಳರು ಬಂದಿದ್ದಾರೆ ಎಂದು ಕೂಗಿದಾಗ ಯಶಸ್ವಿಯು ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ತಂದೆ ಮಂಜುನಾಥ್ ಮಾಸ್ಕ್ ಧರಿಸಿದ ವ್ಯಕ್ತಿಗಳ ಬಳಿ ಹೋದಾಗ 5 ಜನರು ಮಂಜುನಾಥನನ್ನು ಹಿಡಿದುಕೊಂಡು ಬಾಗಿಲು ತೆಗೆಸು ಎಂದು ಚಾಕು ತೋರಿಸಿ ಬೆದರಿಸಿದ್ದು, ಮಂಜುನಾಥ್ ಸಹಕರಿಸದಿದ್ದಾಗ ಆತನ ಮೊಬೈಲ್ ಕಿತ್ತುಕೊಂಡು ಚಾಕುವಿನಿಂದ ಪಕ್ಕೆಗೆ ಹಾಗೂ ಇತರೆ ಕಡೆಯಲ್ಲಿ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


