ಪಾವಗಡ : ಸ್ಥಳೀಯ ಇತಿಹಾಸ ಅಧ್ಯಯನದ ಪೂರ್ಣವಾಗದಿದ್ದರೆ ರಾಷ್ಟ್ರೀಯ ಇತಿಹಾಸ ಕಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಶತಮಾನ ಸೇವೆ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಹೊ.ಮ.ನಾಗರಾಜು ರವರ ನಿಡುಗಲ್ಲು ಸೀಮೆಯ ಅರಸೀಕೆರೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಐತಿಹಾಸಿಕ ಅಂಶಗಳು ರಾಷ್ಟ್ರೀಯ ಇತಿಹಾಸಕ್ಕೆ ಪೂರಕವಾಗಿರುತ್ತವೆ. ಸೂಕ್ಷ್ಮ ತರಹದ ಅಧ್ಯಯನಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿವೆ. ಸೂಕ್ಷ್ಮ ಅಧ್ಯಯನಗಳಲ್ಲಿ ಸಂಶೋಧಕ ಆಕರಗಳ ಸಮಸ್ಯೆ, ಕತೆ ಕವನ ಇತ್ಯಾದಿ ಮೌಖಿಕ ಸಾಹಿತ್ಯದಿಂದ ಐತಿಹಾಸಿಕ ಅಂಶಗಳನ್ನು ಹೆಕ್ಕಿ ತೆಗೆಯುವ ಸಮಸ್ಯೆಗಳಿಗೆ ಗುರಿಯಾಗುವುದು ಸಹಜ. ಆದಾಗ್ಯೂ ಅವುಗಳನ್ನು ಮೀರಿ ನಿಖರವಾದ ವಿಷಯಗಳನ್ನು ಕಟ್ಟಿಕೊಡುವವರೆ ಸಂಶೋಧಕ ಎಂದರು.
ಹೊ.ಮ.ನಾಗರಾಜು ರವರು ಇತಿಹಾಸ ಅಕಾಡೆಮಿಯ ಸದಸ್ಯರಾದ ನಂತರ ದಾಖಲಾಗದ ಐತಿಹಾಸಿಕ ವಿಷಯಗಳನ್ನು ಪ್ರಬಂಧಗಳ ರೂಪದಲ್ಲಿ ಮಂಡನೆ ಮಾಡುತ್ತಿದ್ದು, ನಿಖರವಾದ ಅಂಶಗಳು ಕಂಡುಬರುತ್ತಿವೆ. ಇವರು ನಿಡುಗಲ್ಲು ಸೀಮೆಯ ಅರಸೀಕೆರೆ ಎನ್ನುವ ಪ್ರಸ್ತುತ ಕೃತಿಯಲ್ಲಿ ಸ್ಥಳೀಯ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಪಾವಗಡ ತಾಲ್ಲೂಕು ಇತಿಹಾಸ ಸಂಶೋಧಕರಿಗೆ ಮಾಹಿತಿ ಕಣಜ ಇದ್ದಂತೆ. ಆದರೆ ಸಂಶೋಧನೆಯ ಆಸಕ್ತರ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ಯುವ ಸಂಶೋಧಕರು ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ ಸಂಶೋಧನೆ ಚಟುವಟಿಕೆಗಳನ್ನು ಮಾಡುತ್ತಿದ್ದು, ಬಹುತೇಕ ಕಟ್ ಅಂಡ್ ಪೇಸ್ಟ್ ಗಳಲ್ಲಿ ಮುಳುಗಿದ್ದಾರೆ. ಅಂತಹವರಿಂದ ನೈಜ ಇತಿಹಾಸ ಹೊರಬರಲು ಸಾಧ್ಯವಿಲ್ಲ. ಯುವ ಸಂಶೋದಕರು ಕ್ಷೇತ್ರ ಕಾರ್ಯದ ಮೂಲಕ ಸಾಗಬೇಕು ಎಂದರು.
ತಾಲ್ಲೂಕಿನಲ್ಲಿರುವ ಬೆರಳೆಣಿಕೆಯಷ್ಟು ಸಂಶೋಧಕರಲ್ಲಿ ಹೊ.ಮ.ನಾಗರಾಜು ಒಬ್ಬರಾಗಿದ್ದು, ಈಗಾಗಲೇ ಹಲವು ಕೃತಿಗಳನ್ನು ರಚಿಸಿದ್ದು, ಮತ್ತಷ್ಟು ಮೌಲ್ಯಯುತ ಕೃತಿಗಳು ಇವರಿಂದ ಮೂಡಿಬರಲಿ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಕಟ್ಟನರಸಿಂಹಮೂರ್ತಿ ಕೃತಿಯನ್ನು ಕುರಿತು ಮಾತನಾಡುತ್ತಾ, ಒಂದು ಗ್ರಾಮಕ್ಕೆ ಸಂಬಂಧಿಸಿದ ಇತಿಹಾಸ, ಧರ್ಮ ಸಂಸ್ಕೃತಿ ಜಾನಪದ ಅಂಕಿ ಅಂಶಗಳಾದಿಯಾಗಿ ಗ್ರಾಮಕ್ಕೆ ಸಂಬಂಧಿಸಿದ ಸಮಗ್ರ ವಿಷಯವನ್ನು ಒಳಗೊಂಡ ಕೃತಿಯನ್ನು ಹೊ.ಮ.ನಾಗರಾಜು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ರಚಿಸಿರುವ ನಿಡುಗಲ್ಲು ಸೀಮೆಯ ಅರಸೀಕೆರೆ ಕೃತಿಯಲ್ಲಿ ಸ್ಥಳೀಯ ಇತಿಹಾಸ, ಸ್ಥಳನಾಮ, ಸಮುದಾಯ, ಸಂಘಟನೆ, ದೇವಾಲಯಗಳು, ಕಲೆಗಳು, ಆಚರಣೆಗಳು, ಶಿಕ್ಷಣ ಸಂಸ್ಥೆಗಳು, ಕಲಾವಿದರು, ವೀರಗಲ್ಲುಗಳು, ಕೋಟೆ ಅವಶೇಷಗಳ ವಿಷಯ ಸ್ಪಷ್ಟವಾಗಿ ಮೂಡಿಬಂದಿದೆ. ಗ್ರಾಮದಲ್ಲಿ ವಿಶೇಷವಾಗಿ ಕಂಡುಬರುವ ಗಲ್ಲೆಬಾನ ಆಚರಣೆ, ಗಂಟೆಬಟ್ಲು ಸಂಪ್ರದಾಯ, ಬಸವಣ್ಣ, ಗುಜ್ಜಾರಪ್ಪ ಜಾತ್ರೆ ರಥೋತ್ಸವ, ಹಂಪಣ್ಣನ ಕೆರೆಯಲ್ಲಿ ಸಮಾರಾಧನೆ, ತಾಯಿ ಮುದ್ದಮ್ಮ ವೀರನಾಗಪ್ಪ ದಸರಾ ಉತ್ಸವ, ಭೂತಪ್ಪನ ಕವಳಸೇವೆ, ಶನಿಮಹಾತ್ಮಸ್ವಾಮಿ ಕತೆ ಓದಿಸುವ ಸಂಪ್ರದಾಯ ಇತ್ಯಾದಿಗಳನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದರು.
ಗ್ರಾಮದ ಮಣ್ಣು, ಹವಾಮಾನ, ಪರಿಸರ, ಪ್ರಕೃತಿ ಜೀವ ಸಂಕುಲ, ನಿಖರವಾಗಿ ಮೂಡಿಬಂದಿವೆ. ಗ್ರಾಮಪಂಚಾಯಿತಿ, ಪೋಲೀಸ್ ಠಾಣೆ, ಹಾಲು ಉತ್ಪಾದಕರ ಸಂಘ, ಬ್ಯಾಂಕ್, ವ್ಯಾಪಾರ ವಹಿವಾಟು ಇನ್ನಿತರೆ ದತ್ತಾಂಶಗಳು ಒಳಗೊಂಡಿವೆ. ಆದಾಗಿ ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಗ್ರಾಮದ ಇತಿಹಾಸ ತಿಳಿಯಲು ಸೂಕ್ತವಾಗಿದ್ದು, ಪ್ರತಿಯೊಬ್ಬ ಈ ಕೃತಿಯನ್ನು ಕೊಂಡು ಓದಿ ಸಂಗ್ರಹಿಸಿಕೊಳ್ಳಬೇಕು ಎಂದರು.
ಕೃತಿ ಲೇಖಕರಾದ ಹೊ.ಮ.ನಾಗರಾಜು ಮಾತನಾಡಿ, ಅರಸೀಕೆರೆ ಗ್ರಾಮವು ಸುಮಾರು ಒಂದು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಇಲ್ಲಿ ಕೋಟೆ, ಕೊತ್ತಲು, ವೀರಗಲ್ಲು, ಶಾಸನ ದೇವಾಲಯ ಇತ್ಯಾದಿ ಅವಶೇಷಗಳು ಕಂಡುಬರುತ್ತಿವೆ. ಸುಮಾರು 2–3 ವರ್ಷಗಳ ಕಾಲ ಕ್ಷೇತ್ರಕಾರ್ಯ ಮತ್ತು ಮಾಹಿತಿ ಸಂಗ್ರಹ ಮಾಡಿ ಕೃತಿಯನ್ನು ರಚಿಸಿದ್ದೇನೆ. ಅರಸೀಕೆರೆ ನನ್ನ ತಾಯಿ ತವರು ಆಗಿರುವುದರಿಂದ ಈ ಗ್ರಾಮದ ಬಗ್ಗೆ ನನಗೆ ಹೆಚ್ಚು ಒಲವು ಇದೆ. ಈ ಕೃತಿ ರಚನೆಯ ವೇಳೆ ಹಲವರು ನನ್ನೊಂದಿಗೆ ಮಾಹಿತಿಯನ್ನು ಹಂಚಿಕೊಂಡು ಅನುಕೂಲ ಮಾಡಿದ್ದು, ಅವರಿಗೆ ಋಣಿಯಾಗಿರುತ್ತೇನೆ ಎಂದರು.
ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಬಿ.ತಿಪ್ಪೇಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ ಸಿದ್ದಲಿಂಗಪ್ಪ, ಲೋಕೇಶ್ ಪಾಳೇಗಾರ್, ಅ.ಮು.ತಿಪ್ಪೇಸ್ವಾಮಿ, ರೇಣುಕಾ ರಾಜ್, ಚನ್ನಮಲ್ಲಿಕಾರ್ಜುನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವಿಕಾಸ್ ಪ್ರಕಾಶನದ ಎನ್.ಈಶ್ವರಪ್ಪ ರವರನ್ನು ಹಾಗೂ ಸಾಕಮ್ಮ, ಲಕ್ಷ್ಮಿದೇವಮ್ಮ, ಬೀದಿಮನೆ ಬಸಪ್ಪ, ಆನಂದ, ನಿಂಗಪ್ಪ ಇತರರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಹೆಚ್.ಸಿದ್ದೇಶ್ವರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಡಿ.ಎಸ್.ಸಿ. ಅಧ್ಯಕ್ಷ ಸತೀಶ್ ಕುಮಾರ್, ರಾಜಣ್ಣ, ದೊಡ್ಡಣ್ಣ, ಬಸವರಾಜಪ್ಪ, ಮಿಲ್ಟ್ರಿ ಹನುಮಂತರಾಯಪ್ಪ, ರಮೇಶ, ರಘುನಂದನ್, ಎ.ಪಿ.ಮಲ್ಲಿಕಾರ್ಜುನ, ಬ್ಯಾಡನೂರು ಚನ್ನಬಸಣ್ಣ, ಎ.ಓ.ನಾಗರಾಜು, ರಾಮಲಿಂಗಪ್ಪ, ಆರ್.ಎನ್.ಲಿಂಗಪ್ಪ, ಚಂದ್ರಣ್ಣ.ಎಂ, ಮಂಜುನಾಥ ಶಾಸ್ತ್ರಿ, ಹರಿಕೃಷ್ಣ ಪಿ., ಮಲ್ಲೇಶಪ್ಪ, ಎ.ಮಾರಣ್ಣ, ಅಶ್ವಥನಾರಾಯಣ, ಶಿಕ್ಷಕರಾದ ಶಿವಗಂಗಮ್ಮ, ಗಾಯಿತ್ರಿ ಆರ್., ಚಂದ್ರಮೌಳಿ, ಕವಿತ, ಯಶ್ವಂತ್ ನಾಯ್ಕ, ಸುಧಾ ವಿ., ವಿಮಲ, ಅನಂತಯ್ಯ, ಸತ್ಯನಾರಾಯಣ ಚಾರಿ, ಶ್ರೀದೇವಿ, ಲಕ್ಷ್ಮಿದೇವಿ, ತಿಮ್ಮೋಜಮ್ಮ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


