ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಐತಿಹಾಸಿಕ ಇತಿಹಾಸ ಪ್ರಸಿದ್ಧ ಶ್ರೀಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲು ಮಕರ ಸಂಕ್ರಾತಿ ಹಬ್ಬದ ಮಾರನೇ ದಿನದಿಂದ ಆರಂಭಗೊಳ್ಳುವ ರಾಸುಗಳ ಜಾತ್ರೆಗೆ ರಾಜ್ಯದ ಅನೇಕ ಭಾಗದ ರೈತರ ವಿವಿಧ ತಳಿಯ ರಾಸುಗಳು ಆಗಮಿಸುತ್ತಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಸಡಗರ ಮನೆ ಮಾಡಿತ್ತು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ರಥ ಸಪ್ತಮಿಯಂದು ನಡೆಯುವ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ ವಾರವಿದ್ದಂತೆ ಶುರುವಾಗುವ ಈ ರಾಸುಗಳ ಜಾತ್ರೆಗೆ ಈ ಬಾರಿ ವಿವಿಧ ತಳಿಯ ರಾಸುಗಳು ಹೆಚ್ಚಾಗಿ ಆಗಮಿಸುತ್ತಿದ್ದು ರೈತರನ್ನು ಆಕರ್ಷಿಸುತ್ತಿದೆ.
ಈ ವರ್ಷದ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನ ೫೦ ಸಾವಿರದಿಂದ ೫ ಲಕ್ಷದವರೆಗೆ ರೈತರು ಖರೀದಿಸುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳನ್ನು ಹೆಚ್ಚಿನ ಡಿಮ್ಯಾಂಡ್ ಇದ್ದು, ರಾಜ್ಯದ ಬಳ್ಳಾರಿ, ಹಾವೇರಿ, ಶಿವಮೊಗ್ಗ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಆಂದ್ರ ಪ್ರದೇಶ, ಇತರೆ ರಾಜ್ಯಗಳಿಂದ ರೈತರು ಹೆಚ್ಚಾಗಿ ಆಗಮಿಸಿ ರಾಸುಗಳ ಖರೀದಿಗೆ ಮುಂದಾಗುತ್ತಿರುವುದು ಕಂಡು ಬಂದಿದ್ದು, ಈ ಜಾತ್ರೆ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಮೂಲಭೂತ ವ್ಯವಸ್ಥೆ ಕಲ್ಪಿಸಿದ ಗ್ರಾ.ಪಂ. :
ಮಕರ ಸಂಕ್ರಾತಿ ಹಬ್ಬದ ಮಾರನೇ ದಿನದಿಂದ ಆರಂಭಗೊಳ್ಳುವ ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ಮತ್ತು ರಾಸುಗಳಿಗೆ ಕ್ಯಾಮೇನಹಳ್ಳಿ ಗ್ರಾ.ಪಂಚಾಯ್ತಿ ವತಿಯಿಂದ ಬೀದಿ ದೀಪ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ವ್ಯವಸ್ಥೆ ಕಲ್ಪಿಸಿದ್ದಾರೆಂದು ರಾಸುಗಳ ಜಾತ್ರೆಯಲ್ಲಿ ಪಾಲ್ಗೊಂಡ ರೈತರು ಮಾಹಿತಿ ಹಂಚಿಕೊಂಡರು.
ಪೂರ್ವಿಕರ ಆಚರಣೆಯಂತೆ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲೇ ರಾಸುಗಳ ಜಾತ್ರೆ ಆರಂಭವಾಗುತ್ತದೆ. ಈ ಜಾತ್ರೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯದ ರೈತರು ಪಾಲ್ಗೊಂಡು ರಾಸುಗಳನ್ನು ಮಾರಾಟ ಮಾಡಿ ಖರೀದಿ ಮಾಡುತ್ತಿದ್ದು, ಈ ವಹಿವಾಟು ಒಂದು ವಾರದ ತನಕ ನಡೆಯುತ್ತೆ, ರಾಸುಗಳ ಜಾತ್ರೆ ಮುಗಿದ ಬಳಿಕ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀಆಂಜನೇಯ ಸ್ವಾಮಿಯ ರಥೋತ್ಸವ ಜರುಗಲಿದೆ.
— ಭೀಮರಾಜು, ಅಧ್ಯಕ್ಷ, ಹಂಚಿಹಳ್ಳಿ ಗ್ರಾ.ಪಂ.
ಪುರಾಣ ಪ್ರಸಿದ್ಧವಾದ ಕಮನೀಯ ಕ್ಷೇತ್ರದಲ್ಲಿ ಸಂಕ್ರಾತಿ ಹಬ್ಬಕ್ಕೆ ಆರಂಭಗೊಳ್ಳುವ ರಾಸುಗಳ ಜಾತ್ರೆಯೇ ವಿಶೇಷ. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ರಾಸುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಜಾತ್ರೆ ವಿಶೇಷ, ರಾಸುಗಳ ಜಾತ್ರೆ ನಂತರ ಜ.25 ರಥ ಸಪ್ತಮಿಯಂದು ಶ್ರೀಆಂಜನೇಯ ಸ್ವಾಮಿ ರಥೋತ್ಸವ ಜರುಗಲಿದ್ದು, ಆ ದಿನದಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಹೆಚ್ಚಾಗಿ ಪಾಲ್ಗೊಂಡು ಯಸಸ್ವಿಗೊಳಿಸಬೇಕಿದೆ.
— ರಾಮಾಚಾರ್, ಪ್ರಧಾನ ಅರ್ಚಕ, ಕ್ಯಾಮೇನಹಳ್ಳಿ, ಶ್ರೀಆಂಜನೇಯ ಸ್ವಾಮಿ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಿಂದ 35 ವರ್ಷದಿಂದ ಕ್ಯಾಮೇನಹಳ್ಳಿ ದನಗಳ ಜಾತ್ರೆ ಆಗಮಿಸಿ ರಾಸುಗಳನ್ನು ಖರೀದಿಸುತ್ತೇವೆ, ಪ್ರತಿ ವರ್ಷಕ್ಕಿಂತ ಈ ವರ್ಷ ರಾಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಾವು 2 ರಾಸುಗಳನ್ನು ಖರೀದಿ ಮಾಡಿದ್ದೇವೆ.
— ಮಂಜಣ್ಣ, ರೈತ, ಶಿವಮೊಗ್ಗ ಜಿಲ್ಲೆ.
ಹಳ್ಳಿಕಾರ್ ರಾಸುಗಳ ಮೇಲೆ ನಮಗೆ ಮೊದಲಿನಿಂದಲೂ ವಿಶೇಷ ಒಲವು, ಬೇರೆಯವರು ಖರೀದಿಸಿದ್ದ ಹಳ್ಳಿ ಕಾರ್ ಕರುಗಳನ್ನು ನಾವು ಆತ್ಮೀಯತೆಯಿಂದ ಕೇಳಿಕೊಂಡು ಖರೀದಿ ಮಾಡಿದ್ದೇವೆ.
— ಚಂದ್ರು, ರೈತ ದೊಡ್ಡಬಳ್ಳಾಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


